ಬೆಂಗಳೂರು, ಜ. 25: ನಗರದ ಹೊರ ವರ್ತುಲ ರಸ್ತೆಯ ಫ್ಲೈಓವರ್‌ಗಳು ಸಾವನ್ನು ಆಹ್ವಾನಿಸುತ್ತಿರುವ ಮೃತ್ಯು ಕೂಪದ ಸೇತುವೆಗಳಾಗಿ ಮಾರ್ಪಟ್ಟಿವೆ. ರಸ್ತೆ ವಿಭಜನೆಗೊಳಿಸಿ ನಿರ್ಮಿಸಿದ ಫ್ಲೈಓವರ್ ಇರುವ ಕಡೆಯಲ್ಲಿಯೇ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ಅಗರ, ಬೆಳ್ಳಂದೂರು, ದೇವರಬಿಸನಹಳ್ಳಿ, ಡೊಡ್ಡನೆಕ್ಕುಂದಿ, ಮಹದೇವಪುರ, ನಾಗವಾರ ಇತರೆಡೆಗಳಲ್ಲಿ ಸ್ಪ್ಲಿಟ್ ಫ್ಲೈಓವರ್‌ಗಳಿದ್ದು, ರಾತ್ರಿ, ಬೆಳಗಿನ ಜಾವದ ವೇಳೆ ಅಪಘಾತಗಳು ಹೆಚ್ಚಿವೆ. ಬಲ ಭಾಗದಲ್ಲಿ ಚಲಿಸುವ ವಾಹನ ಸವಾರರು ರಸ್ತೆ ಮಧ್ಯೆದಲ್ಲಿ ವಿಭಜಕ ಇದೆ ಎಂಬುದನ್ನು ಗಮನಿಸದೆ ಮುಂದುವರಿಯುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಬೆಳಕಿನ ಕೊರತೆ, ರಿಪ್ಲೆಕ್ಟರ್‌ಗಳು ಮತ್ತು ಸೂಚನಾ ಫಲಕಗಳನ್ನು ಅಳವಡಿಸದಿರುವುದು ಅಪಘಾತ ಹೆಚ್ಚಲು ಕಾರಣವಾಗುತ್ತಿದೆ.
ಕಳೆದ ವಾರವಷ್ಟೆ ದೇವರ ಬಿಸನಹಳ್ಳಿ ಫ್ಲೈಓವರ್ ಜಂಕ್ಷನ್‌ನಲ್ಲಿ ಟ್ರಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಇದೇ ರೀತಿ ಹೊರ ವರ್ತುಲ ರಸ್ತೆಯ ಇತರೆ ಫ್ಲೈಓವರ್‌ಗಳ ಜಂಕ್ಷನ್‌ಗಳಲ್ಲಿ ಪದೇ ಪದೆ ಅಪಘಾತಗಳು ಸಂಭವಿಸುತ್ತಿವೆ.
ಫ್ಲೈಓವರ್‌ಗಳ ವಿನ್ಯಾಸ ಸರಿಯಿಲ್ಲ. ಆದರೆ ಅದನ್ನು ಈಗ ಬದಲಿಸಲು ಸಾಧ್ಯವಿಲ್ಲ. ಕೊನೆ ಪಕ್ಷ ಕಾಣುವ ಹಾಗೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ಬಿಳಿ ಪಟ್ಟಿಯನ್ನು ಹಾಕಬೇಕು. ರಿಪ್ಲೆಕ್ಟರ್‌ಗಳು, ಬೀದಿ ದೀಪಗಳನ್ನು ಅಳವಡಿಸಬೇಕು,” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮಾರತ್‌ಹಳ್ಳಿ ಮತ್ತು ಅಗರ ಜಂಕ್ಷನ್‌ಗಳಲ್ಲಿ ಶೇ.20ರಷ್ಟು ಬೀದಿ ದೀಪಗಳು ಮಾತ್ರ ಉರಿಯುತ್ತದೆ. ಅಲ್ಲದೇ ಫ್ಲೈಓವರ್ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಸೂಕ್ತವಾದ ಬೆಳಕಿನ ವ್ಯವಸ್ಥೆಯಿಲ್ಲ. ರಾತ್ರಿ 7ರ ನಂತರ ಈ ಫ್ಲೈಓವರ್‌ಗಳಲ್ಲಿ ಚಲಿಸಲು ಭಯವಾಗುತ್ತದೆ, ಎಂದು ಸ್ಥಳಿಯ ನಿವಾಸಿ ನಿತಿನ್ ಮಲ್ಲಿಕಾರ್ಜುನ್ ಆತಂಕ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು, ಸಮಸ್ಯೆ ಕುರಿತು ನಮಗೆ ಅರಿವಿದೆ. ಈ ಹಿಂದೆ ಜಂಕ್ಷನ್‌ಗಳಲ್ಲಿ ರಿಪ್ಲೆಕ್ಟರ್‌ಗಳನ್ನು ಅಳವಡಿಸಲಾಗಿತ್ತು. ಸದ್ಯ ಅದು ಕಾರ್ಯ ನಿರ್ವಹಿಸುತ್ತಿಲ್ಲ. 15 ದಿನಗಳಲ್ಲಿ ಹೊಸ ರಿಪ್ಲೆಕ್ಟರ್‌ಗಳನ್ನು ಅಳವಡಿಸಲಾಗುತ್ತದೆ ಎಂದು ಹೇಳಿದರು.