ಸರ್ಕಾರಿ ಶಾಲೆಗಳಲ್ಲಿ ಶೇ. 49 ಮುಖ್ಯ ಶಿಕ್ಷಕರ ಕೊರತೆ

ಸರ್ಕಾರಿ ಶಾಲೆಗಳಲ್ಲಿ ಶೇ. 49 ಮುಖ್ಯ ಶಿಕ್ಷಕರ ಕೊರತೆ

ಬೆಂಗಳೂರು,  ಅ.  3 : ಮುಖ್ಯೋಪಧ್ಯಾಯರೇ ಇಲ್ಲದೇ ರಾಜ್ಯದಲ್ಲಿ ಶೇ. 49ರಷ್ಟು ಸರ್ಕಾರಿ ಶಾಲೆಗಳು ಮುನ್ನಡೆಯುತ್ತಿರುವ ಕಟು ಸತ್ಯ ಇದೀಗ ಬಹಿರಂಗಗೊಂಡಿದೆ.
ಶಾಲಾ ಶಿಕ್ಷಣ ಸುಧಾರಣೆಗೆ ಹಾಗೂ ಅಧಿಕ ಶಾಲೆಗಳ ನಡುವೆ ಸಂಪರ್ಕ ಕಲ್ಪಿಸುವ ಶಗುನ್ ಪೋರ್ಟಲ್ ಎನ್‌ಜಿಒ ಸಂಸ್ಥೆಯೊಂದು ಶಿಕ್ಷಣ ಇಲಾಖೆಯ ಕರಾಳ ಸತ್ಯ ಮಾಹಿತಿಯನ್ನು ಬಹಿರಂಗಗೊಳಿಸಿದ್ದು, 2015-16 ಮತ್ತು 2016-17 ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ಶೇ. 51ರಷ್ಟು ಮುಖ್ಯೋಪಧ್ಯಾಯರು ಹಾಗೂ ಪ್ರಾಂಶುಪಾಲರನ್ನು ಹೊಂದಿದೆ ಎಂದು ತಿಳಿಸಿದೆ.
ನೀತಿ ಆಯೋಗ ಅಭಿವೃದ್ಧಿಪಡಿಸಿರುವ ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕ ಈ ವರದಿಯನ್ನು ಬಹಿರಂಗಪಡಿಸಿದ್ದು, ರಾಜ್ಯದಲ್ಲಿರುವ 3,315 ಶಾಲೆಗಳು ಕೇವಲ ಏಕೈಕ ಶಿಕ್ಷಕರಿಂದ ನಡೆಯುತ್ತಿದೆ ಎಂದು ತಿಳಿಸಿದೆ.
ಸರ್ಕಾರಿ ಶಾಲೆಗಳಲ್ಲಿ ಪ್ರಾಂಶುಪಾಲರು ಹಾಗೂ ಮುಖ್ಯೊÃಪಾಧ್ಯಾಯರು ಪ್ರಮುಖ ಪಾತ್ರ ವಹಿಸುತ್ತಾರೆ. ಶಿಕ್ಷಕರಿಗೆ ವೇತನ ನೀಡುವುದು ಆಡಳಿತ ನಿರ್ವಹಣೆ ನೋಡಿಕೊಳ್ಳುತ್ತಾರೆ. ಅಲ್ಲದೆ, ಶಿಕ್ಷಣ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಪ್ರಮುಖ ಪಾತ್ರವಹಿಸುತ್ತಾರೆಂದು ಸರ್ಕಾರಿ ಶಾಲೆಯ ಮಾಜಿ ಶಿಕ್ಷಕರೊಬ್ಬರು ಹೇಳಿದ್ದಾರೆ.
ಮುಖ್ಯೋಪಾಧ್ಯಾಯರ ನೇಮಕಾತಿ 2012ರಲ್ಲಿ ಸ್ಥಗಿತಗೊಂಡಿದ್ದು, ಈವರೆಗೂ ಯಾವುದೇ ನೇಮಕಾತಿಗಳು ನಡೆದಿಲ್ಲ. ಶಿಕ್ಷಣ ಇಲಾಖೆ ನೀರಸ ಪ್ರಾತಿನಿಧ್ಯಕ್ಕೆ ಇದೂ ಒಂದು ಪ್ರಮುಖ ಕಾರಣವಾಗಿದೆ ಎಂದು ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಸಹ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಸಿಯೂಟ, ಅಡುಗೆ ಸಿಬ್ಬಂದಿ, ತರಕಾರಿ, ಮೊಟ್ಟೆ ವಿತರಣೆ, ಹಾಲು ವಿತರಣೆ, ಶಿಕ್ಷಕರ ಮಾಸಿಕ ವೇತನ ಬಿಲ್ಲು ತಯಾರಿಕೆ, ವಿದ್ಯಾರ್ಥಿ ವೇತನ-ಹೀಗೆ ತರಹೇವಾರಿ ಜವಾಬ್ದಾರಿ ನಿಭಾಯಿಸುವಂತಹ ಮುಖ್ಯ ಶಿಕ್ಷಕರಿಲ್ಲದೆ ಸರ್ಕಾರಿ ಶಾಲೆಗಳು ತುಂಬಾ ಸಂಕಷ್ಟದಲ್ಲಿರುವುದಾಗಿ ಸಂಸ್ಥೆ ಬಹಿರಂಗಪಡಿಸಿದೆ.
ಇದರ ಜೊತೆಯಲ್ಲಿ ಒಂದರಿಂದಲೇ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಿರುವುದರಿಂದ ಮಕ್ಕಳ ದಾಖಲಾತಿ ಪ್ರಮಾಣ ದ್ವಿಗುಣಗೊಂಡಿದೆ. ಹೀಗಾಗಿ ಮುಖ್ಯ ಶಿಕ್ಷಕರ ಕೊರತೆ ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಇರುವ ಶಿಕ್ಷಕರ ಕೊರತೆಯನ್ನು ಆದಷ್ಟೂ ಜರೂರಾಗಿ ಭರ್ತಿ ಮಾಡಿದರೆ ಪ್ರಸ್ತುತ ಉಲ್ಬಣಗೊಂಡಿರುವ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಬಹುದು ಎಂಬ ವಾಸ್ತವ ಮಾಹಿತಿಯನ್ನು ಶಿಕ್ಷಣ ಸಚಿವರ ಗಮನಕ್ಕೆ ವರದಿ ತಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos