ಕೆ.ಆರ್ ಪುರ, ಆ. 23: ಸರ್ಕಾರಿ ಶಾಲಾ ಮಕ್ಕಳ ಭದ್ರತೆ ಹಾಗೂ ಶಿಸ್ತುಪಾಲನೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಅಂಬೇಡ್ಕರ್ ನಗರ ಎಸ್‌ಡಿಎಂಸಿ ಮುಖ್ಯಸ್ಥ ಇಟಾಟಿ ಮಂಜು ತಿಳಿಸಿದರು .
ರಾಮಮೂರ್ತಿ ನಗರ ವಾರ್ಡ್‌ನ ಅಂಬೇಡ್ಕರ್ ನಗರ ಸರ್ಕಾರಿ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಡೆಸ್ಕ್‌ಗಳ ಉದ್ಘಾಟನೆ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಲೆಗೆ ಅವಶ್ಯಕವಿರುವ ಎಲ್ಲಾ ಸೌಲಭ್ಯ ಹಾಗೂ ಭದ್ರತೆ ಕೈಗೊಂಡಿರುವುದಾಗಿ ತಿಳಿಸಿದ ಅವರು ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಕಲ್ಪಿಸುವುದೇ ನನ್ನ ಗುರಿ ಎಂದರು. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಜನಕ್ಕೆ ಅಂಬೇಡ್ಕರ್ ನಗರದ ಈ ಸರ್ಕಾರಿ ಶಾಲೆ ಮಾದರಿಯಾಗಲಿದೆ ಎಂದರು . ಶಾಸಕರಾಗಿದ್ದ ಬಸವರಾಜಣ್ಣ ಅವರ ಜತೆ ಎನ್ ಜಿಒಗಳು ಕೈ ಜೋಡಿಸಿದ್ದು, ಇದರೊಂದಿಗೆ ನನ್ನಸಹಕಾರವೂ ಇದೆ. ಈ ಶಾಲೆಯನ್ನು ಮಾದರಿಯನ್ನಾಗಿ ಮಾಡುವುದೇ ನಮ್ಮ ಗುರಿ ಎಂದರು . ಸುಮಾರು 3 ಲಕ್ಷ ರೂ ಗಳಲ್ಲಿ 360 ಡಿಗ್ರಿಯ ನಾಲ್ಕು ಸಿಸಿ ಕ್ಯಾಮೆರಾ, ಕ್ಲಾಸ್ ರೂಂಗಳಿಗೆ 16 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಹೇಳಿದರು . ಭೌತಿಕ ಸೌಲಭ್ಯಗಳನ್ನು ಸಾಕಷ್ಟು ಒದಗಿಸುತ್ತಿದ್ದು, ಅದೇ ರೀತಿ ಎಸ್ ಎಸ್ ಎಲ್ ಸಿಯಲ್ಲಿನ ಮಕ್ಕಳು ಶೇ . 100ರಷ್ಟು ಫಲಿತಾಂಶ ನೀಡಲು ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು. ರೋಟರಿ ವೆಸ್ಟ್ ಬೆಂಗಳೂರು ವತಿಯಿಂದ 18 ಡೆಸ್ಕ್‌ಗಳನ್ನು ನೀಡಲಾಗಿದೆ.
ಹೋಪ್ ಫೌಂಡೇಷನ್‌ರವರು ಎಸ್ ಎಪಿ ಸಂಸ್ಥೆಯ ಸಹಯೋಗದಿಂದ ಶಾಲಾ ಆವರಣದಲ್ಲಿ ಹಾವು ಹಾಗೂ ಕ್ರಿಮಿಕೀಟಗಳು ಬರದಂತೆ ಸಸಿಗಳನ್ನು ನೆಟ್ಟಿದ್ದಾರೆ ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಬಿ. ವಿ.ಭಾರತಿ ಮಾತನಾಡಿ, ಈ ಹಿಂದೆ ಶಾಲೆಯಲ್ಲಿ 49 ಮಕ್ಕಳು ಮಾತ್ರ 8 , 9 ಹಾಗೂ 10ನೆ ತರಗತಿಗಳಿಗೆ ಬರುತ್ತಿದ್ದರು . ಎಸ್ ಡಿಎಂಸಿ ಮುಖ್ಯಸ್ಥ ಮಂಜುನಾಥ್ (ಇಟಾಚಿ) ವಹಿಸಿದ ಕಾಳಜಿಯಿಂದ ಹೆಚ್ಚು ಅಭಿವೃದ್ಧಿಯಾಗಿ ಈ ತರಗತಿಗಳಲ್ಲಿ ಓದುವವರ ಸಂಖ್ಯೆ 150ರ ಗಡಿ ದಾಟಿದೆ ಎಂದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಎನ್.ಎ.ಹರೀಶ್, ಶಾಲೆಯ ಮುಖ್ಯ ಶಿಕ್ಷಕರಾದ ದಾಕ್ಷಾಯಿಣಿ, ಎಸ್.ಎ.ಪಿಯ ರಾಘವೇಂದ್ರರಾವ್, ಅನಿಲ್ ಖಾತ್ರಿ, ಆನಂದ್ ಜಯಕುಮಾರ್, ಅಜಯ್ ಮತ್ತಿತರರಿದ್ದರು.