ಮ್ಯಾಂಚೆಸ್ಟರ್, ಜೂ. 27: ಭಾರತ ನಾಯಕ ವಿರಾಟ್ ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 20,000 ರನ್ ಪೂರೈಸುವ ಮೂಲಕ ಕ್ರಿಕೆಟ್ ದಂತಕತೆಗಳಾದ ಸಚಿನ್ ತೆಂಡುಲ್ಕರ್ ಹಾಗೂ ಬ್ರಿಯಾನ್ ಲಾರಾ ಹಳೆಯ ದಾಖಲೆಯೊಂದನ್ನು ಏಕಕಾಲದಲ್ಲಿ ಪುಡಿಗಟ್ಟಿದರು.
ವೆಸ್ಟ್ಇಂಡೀಸ್ ವಿರುದ್ಧ ಇಂದು ನಡೆದ ವಿಶ್ವಕಪ್ ಪಂದ್ಯದಲ್ಲಿ ಕೊಹ್ಲಿ 37 ರನ್ ತಲುಪಿದ ತಕ್ಷಣ ವೇಗದ 20,000 ಅಂತರ್ ರಾಷ್ಟ್ರೀಯ ರನ್ ಗಳಿಸಿದರು. ತನ್ನ 417ನೇ ಇನಿಂಗ್ಸ್ನಲ್ಲಿ ಈ ಮೈಲುಗಲ್ಲು ತಲುಪಿದ ಕೊಹ್ಲಿ ತಲಾ 453ನೇ ಇನಿಂಗ್ಸ್ ನಲ್ಲಿ 20,000 ರನ್ ಪೂರೈಸಿದ್ದ ತೆಂಡುಲ್ಕರ್ ಹಾಗೂ ಲಾರಾ ದಾಖಲೆಯನ್ನು ಮುರಿದರು.
30ರ ಹರೆಯದ ಕೊಹ್ಲಿ ಸಚಿನ್ ತೆಂಡುಲ್ಕರ್(34,357 ರನ್) ಹಾಗೂ ರಾಹುಲ್ ದ್ರಾವಿಡ್(24,208 ರನ್)ಬಳಿಕ 20,000 ಅಂತರ್ ರಾಷ್ಟ್ರೀಯ ರನ್ ಗಳಿಸಿದ ಭಾರತದ 3ನೇ ದಾಂಡಿಗ ಎನಿಸಿಕೊಂಡರು.