ದೇವನಹಳ್ಳಿ, ಸೆ. 3: ತಾಲೂಕಿನ ಕುಂದಾಣ ಗ್ರಾಮದಿಂದ ತಿಂಡ್ಲು ಸರ್ಕಲ್-ಜಿಲ್ಲಾಡಳಿತ ಭವನಕ್ಕೆ ಹೋಗುವ ಮಾರ್ಗದ ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿದ್ದು, ಮಳೆಯಿಂದಾಗಿ ಗುಂಡಿಗಳಲ್ಲಿ ನೀರು ನಿಂತು ದ್ವಿಚಕ್ರವಾಹನ ಸವಾರರಿಗೆ ಹೆಚ್ಚು ತೊಂದರೆ ಎದುರಿಸುವಂತೆ ಆಗಿದೆ.
ದಿನನಿತ್ಯ ನೂರಾರು ವಾಹನಗಳು ಈ ರಸ್ತೆಯನ್ನು ಅವಲಂಬಿಸಿದ್ದು, ಜಿಲ್ಲಾಡಳಿತ ಭವನ ಇಲ್ಲಿಂದ ಕೇವಲ ಅರ್ಧ ಕಿಮೀ ಮಾತ್ರ ಇದೆ. ಆದರೆ ದಿನನಿತ್ಯ ಈ ರಸ್ತೆಯಲ್ಲಿ ದೊಡ್ಡಗಾತ್ರದ ವಾಹನಗಳು ಓಡಾಡುವುದರಿಂದ ರಸ್ತೆಯುದ್ದಕ್ಕೂ ಅಲ್ಲಲ್ಲಿ ಗುಂಡಿಗಳು ಬಿದ್ದು, ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ.
ಈ ರಸ್ತೆಯಲ್ಲಿ ಶಾಲಾ ವಾಹನಗಳು, ದ್ವಿಚಕ್ರವಾಹನ ಸವಾರರು, ರೈತಾಪಿ ವರ್ಗದವರು ಹೆಚ್ಚಾಗಿ ಓಡಾಡುವುದರಿಂದ ಅಪ್ಪಿತಪ್ಪಿ ಗುಂಡಿಗೆ ಚಕ್ರ ಇಳಿದರೆ ಬೈಕ್ ಸವಾರರು ಬಿದ್ದು ಆಸ್ಪತ್ರೆ ಸೇರುವುದು ಖಚಿತ.
ರಾತ್ರಿ ವೇಳೆಯಂತೂ ಈ ರಸ್ತೆಯಲ್ಲಿ ಬೀದಿ ದೀಪಗಳಿಲ್ಲದ ಕಾರಣ ವಾಹನ ಸವಾರರಿಗೆ ಮತ್ತಷ್ಟು ಕಷ್ಟದ ಪರಿಸ್ಥಿತಿ ಎದುರಿಸುವಂಥೆ ಆಗಿದೆ. ಸ್ಥಳೀಯ ಗ್ರಾಪಂ ಅಕಾರಿಗಳು ಇದೇ ರಸ್ತೆಯಲ್ಲಿ ದಿನನಿತ್ಯ ಕಚೇರಿ ಕೆಲಸಗಳಿಗೆ ಬಂದು ಹೋಗುತ್ತಾರೆ. ಆದರೆ ಈ ರೀತಿಯಾಗಿರುವ ರಸ್ತೆ ದುರಸ್ಥಿಗೆ ಮುಂದಾಗಿಲ್ಲ ಎಂದು ಸ್ಥಳಿಯರು ಹೇಳುತ್ತಾರೆ.
ಕುಂದಾಣದ ಈ ರಸ್ತೆಯು ತಿಂಡ್ಲು ರಸ್ತೆಯಿಂದ ರಸ್ತೆ ಯಲಹಂಕ, ಬೆಂಗಳೂರು ಮಾರ್ಗವಾಗಿ ಹೋದರೆ, ಇದೇ ರಸ್ತೆಯು ಕುಂದಾಣ ಸರ್ಕಲ್ ಬಲಭಾಗದಿಂದ ಚಪ್ಪರಕಲ್ಲು, ಜಿಲ್ಲಾಡಳಿತ ಭವನ, ದೊಡ್ಡಬಳ್ಳಾಪುರ, ದೇವನಹಳ್ಳಿ ನಗರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳಾಗಲೀ ಅಥವಾ ಜನಪ್ರತಿನಿಗಳಾಗಲೀ ಎಚ್ಚೆತ್ತುಕೊಂಡು ಬಿದ್ದಿರುವ ಗುಂಡಿಯನ್ನು ಮುಚ್ಚಿಸುವ ಕೆಲಸ ಮಾಡಬೇಕು. ಇನ್ನಾದರೂ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.