ಬೆಂಗಳೂರು: ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ 17ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೇವಲ 1 ರನ್ಗಳಿಂದ ಸೋಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇ ಆಫ್ಗೆ ಪ್ರವೇಶ ಪಡೆದಿದೆ. ಇತ್ತ ರಣರೋಚಕ ಪಂದ್ಯದಲ್ಲಿ ಸೋತ ಆರ್ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪವರ್ ಪ್ಲೇನಲ್ಲಿ ನಾಯಕಿ ಮೆಗ್ ಲ್ಯಾನಿಂಗ್ ಜೊತೆಗೆ ಶಫಾಲಿ ವರ್ಮಾ 53 ರನ್‌ಗಳ ಪ್ರಬಲ ಆರಂಭವನ್ನು ನೀಡಿದರು. ಆದರೆ ಪವರ್ ಪ್ಲೇ ಅಂತ್ಯದ ನಂತರ ಶಫಾಲಿ ವರ್ಮಾ 18 ಎಸೆತಗಳಲ್ಲಿ 23 ರನ್ ಗಳಿಸಿ ಆಶಾ ಶೋಭನಾ ಎಸೆತದಲ್ಲಿ ಔಟಾದರು. ನಂತರ 60 ರನ್ ಆಗುವಷ್ಟರಲ್ಲಿ ನಾಯಕಿ ಮೆಗ್ ಲ್ಯಾನಿಂಗ್ ಕೂಡ ಶ್ರೇಯಾಂಕಾ ಪಾಟೀಲ್ ಎಸೆತದಲ್ಲಿ ಎಲ್ ಬಿಡಬ್ಲ್ಯೂ ಆಗಿ ಪೆವಿಲಿಯನ್‌ಗೆ ಮರಳಿದರು. ಮರಿಜ್ನೆ ಕಪ್ 6 ಎಸೆತಗಳಲ್ಲಿ 12 ರನ್ ಗಳಿಸಿ ಡೆಲ್ಲಿ ತಂಡದ ಮೊತ್ತವನ್ನು 181ಕ್ಕೆ ತಲುಪಿಸಿದರು. ಬೆಂಗಳೂರು ಪರ ಬೌಲಿಂಗ್ನಲ್ಲಿ ಶ್ರೇಯಾಂಕಾ ಪಾಟೀಲ್ ಗರಿಷ್ಠ 4 ವಿಕೆಟ್ ಪಡೆದರೆ, ಆಶಾ ಶೋಭನಾ ಒಂದು ವಿಕೆಟ್ ಪಡೆದರು.
ಡೆಲ್ಲಿ ನೀಡಿದ 182 ರನ್‌ಗಳ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಅತ್ಯಂತ ಕಳಪೆ ಆರಂಭ ಸಿಕ್ಕಿತು. ನಾಯಕಿ ಸ್ಮೃತಿ ಮಂಧಾನ 5 ರನ್ ಗಳಿಸಿ ಆಲಿಸ್ ಕ್ಯಾಪ್ಸಿ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆದರು. ಇದಾದ ಬಳಿಕ ಆಸ್ಟ್ರೇಲಿಯದ ಬ್ಯಾಟರ್ ಎಲಿಸ್ ಪೆರ್ರಿ ಬೆಂಗಳೂರಿನ ಇನ್ನಿಂಗ್ಸ್ ಅನ್ನು ಕೈಗೆತ್ತಿಕೊಂಡು ಡೆಲ್ಲಿಯ ಬೌಲಿಂಗ್ ಮೇಲೆ ದಾಳಿ ಆರಂಭಿಸಿದರು. ಎಲಿಸ್ ಪೆರ್ರಿ ಮತ್ತು ಸೋಫಿ ಮೊಲಿನೆಕ್ಸ್ ಎರಡನೇ ವಿಕೆಟ್‌ಗೆ 80 ರನ್‌ಗಳ ಅತ್ಯುತ್ತಮ ಜೊತೆಯಾಟವನ್ನು ಮಾಡಿದರು.
ಎಲ್ಲಿಸ್ ಪೆರ್ರಿ ರನೌಟ್ ಆಗುವ ಮೊದಲು 32 ಎಸೆತಗಳಲ್ಲಿ 49 ರನ್‌ಗಳ ವಿಶೇಷ ಇನ್ನಿಂಗ್ಸ್ ಆಡಿದ್ದರು. ಪೆರ್ರಿ ಅವರ ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ್ದವು. ಸೋಫಿ ಮೊಲಿನೆಕ್ಸ್ ಕೂಡ ಪೆರ್ರಿಗೆ ಉತ್ತಮ ಬೆಂಬಲ ನೀಡಿದರು. ಆದರೆ ಪೆರ್ರಿ ಔಟಾದ ನಂತರ, ಅವರು ಕೂಡ 30 ಎಸೆತಗಳಲ್ಲಿ 33 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೋಫಿ ಡಿವೈನ್, 16 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 26 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಆದರೆ ತಂಡದ ಪರ ಗೆಲುವಿಗಾಗಿ ಹೋರಾಡಿದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 51 ರನ್ ಕಲೆಹಾಕಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ವಾಸ್ತವವಾಗಿ ಕೊನೆಯ ಓವರ್ನಲ್ಲಿ ಆರ್ಸಿಬಿ ಗೆಲುವಿಗೆ 17 ರನ್‌ಗಳ ಅವಶ್ಯಕತೆ ಇತ್ತು. ಕೊನೆಯ ಎರಡು ಎಸೆತಗಳಲ್ಲಿ 8 ರನ್ ಬೇಕಿತ್ತು. ಈ ವೇಳೆ ಸ್ಟ್ರೈಕ್ನಲ್ಲಿದ್ದ ರಿಚಾ ಐದನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ಸನಿಹಕೆ ತಂದರು. ಕೊನೆಯ ಎಸೆತದಲ್ಲಿ ತಂಡಕ್ಕೆ 2 ರನ್ ಬೇಕಿತ್ತು. ಆದರೆ ಕೊನೆಯ ಎಸೆತದಲ್ಲಿ ರನ್ ಕದಿಯುವ ವೇಳೆ ರಿಚಾ ರನ್ಔಟ್ಗೆ ಬಲಿಯಾದರು. ಅಂತಿಮವಾಗಿ ಡೆಲ್ಲಿ ತಂಡ 1 ರನ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.