ನವದೆಹಲಿ, ಅ. 25: ಸಮ್ಮಿಶ್ರ ಸರ್ಕಾರದ ವೇಳೆ ಕುಮಾರಸ್ವಾಮಿ ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಈ ಬಗ್ಗೆ ಜೆಡಿಎಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಸಿದ್ದರಾಮಯ್ಯ ವಿರುದ್ದ ಅನಗತ್ಯ ಆರೋಪ ಮಾಡಿದ್ದಾರೆ. ನಾವು ಕೇಳಿದ ಯಾವ ಕೆಲಸವನ್ನು ಎಚ್.ಡಿ.ಕೆ ಮಾಡಿಕೊಡುತ್ತಿರಲಿಲ್ಲ. ನಮ್ಮ ಜತೆ ಚೆನ್ನಾಗಿ ಮಾತನಾಡುತ್ತಿದ್ದರೇ ಹೊರತು ನಮ್ಮ ಯಾವ ಕೆಲಸವನ್ನು ಮಾಡಿಕೊಡುತ್ತಿರಲಿಲ್ಲ. ಅವರ ಶಾಸಕರನ್ನೇ ಹಿಡಿದಿಟ್ಟುಕೊಳ್ಳಲು ಕುಮಾರಸ್ವಾಮಿಗೆ ಸಾಧ್ಯವಾಗಲಿಲ್ಲ. ಈಗ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುವುದು ಎಷ್ಟು ಸರಿ..
ಮೈತ್ರಿ ಸರ್ಕಾರದ ಪತನಕ್ಕೆ ಕಾಂಗ್ರೆಸ್ ಕಾರಣ ಎಂದು ಆರೋಪಿಸುತ್ತಿರುವ ಕುಮಾರಸ್ವಾಮಿ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಚುನಾಯಿತ ಪ್ರತಿನಿಧಿಗಳನ್ನು ಕುಮಾರಸ್ವಾಮಿ ಸರಿಯಾಗಿ ನಡೆಸಿಕೊಂಡಿಲ್ಲದ್ದೇ ಮೈತ್ರಿ ಸರ್ಕಾರದ ಪತನಕ್ಕೆ ಕಾರಣ ಎಂದು ಹೆಚ್.ಎಂ.ರೇವಣ್ಣ ತಿರುಗೇಟು ನೀಡಿದರು.