ಹೈದರಾಬಾದ್, ಆ. 19 : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಚಿನ್ನದ ಇಟ್ಟಿಗೆ ನಾನು ನೀಡುತ್ತೇನೆ ಎಂದು ಮೊಘಲ್ ಸಾಮ್ರಾಜ್ಯದ ವಂಶಸ್ಥ ಹಬೀಬುದ್ದೀನ್ ಹೇಳಿದ್ದಾರೆ.
ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ, ಈಗ ರಾಮ ಜನ್ಮಭೂಮಿ ಭೂವಿವಾದ ಆಲಿಸುತ್ತಿರುವ ಸುಪ್ರೀಂಕೋರ್ಟ್ ಪೀಠದ ಮುಂದೆ ಅರ್ಜಿ ಸಲ್ಲಿಸಿ ತನ್ನ ವಾದವನ್ನು ಆಲಿಸಬೇಕೆಂದು ಕೇಳಿಕೊಂಡಿದ್ದಾರೆ. ಫೆಬ್ರವರಿ 8ರಂದು ಈ ಅರ್ಜಿ ಸಲ್ಲಿಸಿದ್ದು ಇನ್ನೂ ಸುಪ್ರೀಂ ವಿಚಾರಣೆಗೆ ತೆಗೆದುಕೊಂಡಿಲ್ಲ. ಮೊಘಲ್ ಸಾಮ್ರಾಜ್ಯದ ಕೊನೆಯ ದೊರೆ ಬಹಾದೂರ್ ಷಾ ಜಾಫರ್ ಆತನ ಆರನೇ ಪೀಳಿಗೆಯ ವಂಶಸ್ಥ ಹಬೀಬುದ್ದೀನ್ ಕಳೆದ ಸೆಪ್ಟೆಂಬರ್ ನಲ್ಲಿ ಈ ಆಫರ್ ಪ್ರಕಟಿಸಿದ್ದರು.
ವಿವಾದಿತ ಸ್ಥಳಕ್ಕೆ ಸಂಬಂಧಿಸಿದ ಯಾರ ಬಳಿಯೂ ದಾಖಲೆಗಳಿಲ್ಲದ ಕಾರಣ ಯಾರಿಗೂ ಹಕ್ಕಿಲ್ಲ. ಆದರೆ ಮೊಘಲ್ ವಂಶಸ್ಥನಾಗಿರುವುದರಿಂದ ಆ ಜಾಗದ ಮೇಲೆ ನಮಗೆ ಹಕ್ಕಿದೆ. ಹೀಗಾಗಿ ಈ ಜಾಗವನ್ನು ನಮಗೆ ನೀಡುವಂತೆ ಕೇಳಿಕೊಂಡಿದ್ದಾರೆ. ಸೇನೆಯ ನಮಾಜ್ಗಾಗಿ ಬಾಬರಿ ಮಸೀದಿ ನಿರ್ಮಿಸಲಾಗಿದೆ. ಅಲ್ಲಿ ಮೊದಲು ಏನಿತ್ತು ಎನ್ನುವ ವಿಚಾರಕ್ಕೆ ನಾನು ಈಗ ಹೋಗುವುದಿಲ್ಲ. ಒಬ್ಬ ನೈಜ ಮುಸ್ಲಿಮನಾಗಿ ಹಿಂದೂಗಳ ಭಾವನೆಗಳನ್ನು ಗೌರವಿಸಿ ಜಾಗ ಬಿಟ್ಟುಕೊಡುತ್ತೇನೆ.