ರಾಯಚೂರಿನ ರಾಹುಲ್ ಸಭೆಗೆ ಕಾಂಗ್ರೆಸ್ ನಾಯಕರ ದೌಡು!

ರಾಯಚೂರಿನ ರಾಹುಲ್ ಸಭೆಗೆ ಕಾಂಗ್ರೆಸ್ ನಾಯಕರ ದೌಡು!

ರಾಯಚೂರು, ಏ. 19, ನ್ಯೂಸ್ ಎಕ್ಸ್ ಪ್ರೆಸ್: ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದ ಹಿನ್ನೆಲೆಯಲ್ಲಿ ಏಪ್ರಿಲ್.23 ರಂದು ನಡೆಯಲಿರುವ ಎರಡನೇ ಹಂತದ ಚುನಾವಣೆಗೆ ‘ಕೈ’ ನಾಯಕರು ಸಿದ್ದತೆ ನಡೆಸಿಕೊಳ್ಳುತ್ತಿದ್ದು ರಾಜ್ಯದ ಬಹುತೇಕ ನಾಯಕರು ಉತ್ತರ ಕರ್ನಾಟಕಕ್ಕೆ ಶಿಫ್ಟ್ ಆಗಿದ್ದಾರೆ. ಅಲ್ಲದೆ ಇಂದು ರಾಯಚೂರಿನಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಪಾಳ್ಗೊಳ್ಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿರುವ ರಾಹುಲ್ ಗಾಂಧಿ ರಾಯಚೂರಿನ ಅಭ್ಯರ್ಥಿ ಬಿ.ವಿ. ನಾಯಕ್ ಪರ ಪ್ರಚಾರ ನಡೆಸಲಿದ್ದಾರೆ. ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪಾಲ್ಗೊಳ್ಳಲಿದ್ದಾರೆ. ರಾಜ್ಯ ಕಾಂಗ್ರೆಸ್​ ನಾಯಕರ ಸಾಲಿನಲ್ಲಿ ಮೈತ್ರಿ ಸರ್ಕಾರದ ಸಮನ್ವಯ ಸಮತಿ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ 50 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದ್ದು, ಸಮಾವೇಶಕ್ಕಾಗಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ ಅಲ್ಲದೆ 35 ಸಾವಿರ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಲ್ಲದೆ ಸಮಾವೇಶಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್​ ಒದಗಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು ತಿಳಿಸಿದ್ದಾರೆ. ಉತ್ತರ ಕರ್ನಾಟದ ಬೆಳಗಾವಿ, ಚಿಕ್ಕೋಡಿ, ಗದಗ, ಹುಬ್ಬಳ್ಳಿ-ಧಾರವಾಡ, ಬೀದರ್, ಕೊಪ್ಪಳ ಬಳ್ಳಾರಿ ಹಾಗೂ ಮಲೆನಾಡಿನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದ್ದು ಈ ಕ್ಷೇತ್ರಗಳು ಇಡೀ ರಾಜ್ಯದ ಗಮನಸೆಳೆಯುತ್ತಿದೆ. ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ 14 ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು, ಎರಡನೇ ಹಂತದಲ್ಲಿ ಏ.23 ರಂದು ಉತ್ತರ ಕರ್ನಾಟಕದ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್ ಸಕಲ ಸಿದ್ಧತೆ ನಡೆಸಿಕೊಳ್ಳುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos