ಭಾರತದ ಮಹಾಗ್ರಂಥಗಳಲ್ಲಿ ಒಂದಾದ ರಾಮಾಯಣದಲ್ಲಿಯೇ ರಾಗಿಯ ಮಹತ್ವ ಸಾರುವ ಕಥೆ ಇದೆ. ಕನಕದಾಸರು ಅದನ್ನೇ ತಮ್ಮ ರಾಮಧಾನ್ಯ ಚರಿತೆಯಲ್ಲಿ ಬರೆದಿದ್ದಾರೆ. ರಾಮನ ಓಲಗದಲ್ಲೊಮ್ಮೆ ರಾಗಿ ಶ್ರೇಷ್ಠವೋ, ಭತ್ತ ಶ್ರೇಷ್ಠವೋ ಎಂಬ ಚರ್ಚೆ ಮೊದಲಾಯಿತು. ಈ ವಾಗ್ವಾದಲ್ಲಿ ಸ್ವತಃ ರಾಗಿ ಮತ್ತು ಭತ್ತಗಳೂ ಪಾಲ್ಗೊಂಡು ತಮ್ಮ ತಮ್ಮ ಹಿರಿಮೆ ಗರಿಮೆಯನ್ನು ಹೇಳಿಕೊಂಡವು. ಇದನ್ನು ಆಲಿಸಿದ ರಾಮ- ಯಾವ ತೀರ್ಪನ್ನೂ ನೀಡದೆ ಇವುಗಳನ್ನು ಆರು ತಿಂಗಳ ಕಾಲ ಒಂದೆಡೆ ಇಡಿ ಎಂದ.
ಆರು ತಿಂಗಳ ನಂತರ ಈ ಎರಡೂ ಧಾನ್ಯಗಳನ್ನು ವೀಕ್ಷಿಸಿದಾಗ ಅಕ್ಕಿ ಮುಗ್ಗಿಹೋಗಿತ್ತು. ರಾಗಿ ಸದೃಢವಾಗಿತ್ತು. ಕೊನೆಗೆ ರಾಮ, ರಾಗಿಯೇ ಶ್ರೇಷ್ಠ ಎಂದು ತೀರ್ಪು ನೀಡಿದ. ರಾಗಿಯನ್ನು ಮಾನ್ಯ ಮಾಡಿದ್ದಕ್ಕೆ ಆತ ‘ರಾಘವ’ ಎಂದು ಹೆಸರಾದ ಎನ್ನುತ್ತಾರೆ ಕನಕದಾಸರು. ಅದಕ್ಕೆ ನಮ್ಮ ಪೂರ್ವಿಕರು ‘ಹಿಟ್ಟಂ ತಿಂದವ ಬೆಟ್ಟವಂ ಕಿತ್ತಿಟ್ಟ’ ಎನ್ನುತ್ತಾರೆ. ಅಂದರೆ, ರಾಗಿ ಮುದ್ದೆ ಉಂಡವ ಬೆಟ್ಟ ಕಿತ್ತಿಡುವಷ್ಟು ಬಲಶಾಲಿಯಾಗಿರುತ್ತಾನೆ ಎಂಬುದು ಅವರ ಮಾತಿನ ಸಾರ. ರಾಗಿ ಬೇಸಾಯದಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ಕರ್ನಾಟಕ ಬಿಟ್ಟರೆ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲೂ ರಾಗಿ ಪ್ರಮುಖ ಬೆಳೆ. ರಾಗಿಯ ಕಾಳು ಉಳಿದ ಆಹಾರ ಧಾನ್ಯಗಳಿಗಿಂತ ಸಣ್ಣದಾಗಿರುತ್ತದೆ ಮತ್ತು ಗಟ್ಟಿಯಾಗಿರುತ್ತದೆ. ಕೆಂಪು ಇಲ್ಲವೇ ಕಂದು ಬಣ್ಣದಿಂದ ಕೂಡಿರುವ ರಾಗಿಯಲ್ಲಿ ಪ್ರೊಟೀನಗ್ .ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ನಾರು, ಸೋಡಿಯಂ . ಪೊಟ್ಯಾಶಿಯಂ. ಗಂಧಕ ಅಂಶಗಳು ಇವೆ.
ಪೋಷಕಾಂಶಗಳ ವಿವರ : 100 ಗ್ರಾಂ ರಾಗಿಯಲ್ಲಿನ ಪೋಷಕಾಂಶಗಳ ವಿವರ ಕೆಳಕಂಡಂತಿದೆ: ಪೋಷಕಾಂಶ – ಪ್ರತಿಶತ, ಪ್ರೋಟಿನ್ – 7.3 ಗ್ರಾಂ, ಕೊಬ್ಬು -1.3 ಗ್ರಾಂ, ಪಿಷ್ಟ – 72 ಗ್ರಾಂ, ಖನಿಜಾಂಶ -2.7 ಗ್ರಾಂ, ಸುಣ್ಣದಂಶ -3.44 ಗಾಂ, ನಾರಿನಂಶ -3.6ಗ್ರಾಂ, ಶಕ್ತಿ -328 ಕಿ.ಕ್ಯಾ
# ರಾಗಿ ದೋಸೆ : ಬೇಕಾಗುವ ಸಾಮಗ್ರಿಗಳು > 1. ರಾಗಿ ಹಿಟ್ಟು, 2. ಆಲಿವ್ ಎಣ್ಣೆ, 3. ಕೊತ್ತಂಬರಿ ಸೊಪ್ಪು, 4. ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿ, 5. ಹೆಚ್ಚಿದ ಹಸಿ ಮೆಣಸಿನ ಕಾಯಿ., 6. ಖಾರದ ಪುಡಿ.
ಮಾಡುವ ವಿಧಾನ : ರಾಗಿ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ನೀರನ್ನು ಹಾಕುತ್ತಾ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.ಕಲಸಿದ ಹಿಟ್ಟಿಗೆ, ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ, ಉಪ್ಪು, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.ಖಾರವನ್ನು ಇಷ್ಟ ಪಡುವವರು ಸ್ವಲ್ಪ ಖಾರದ ಪುಡಿಯನ್ನು ಬೇಕಾದರೆ ಹಾಕಬಹುದು. ಯಾವುದೇ ರೀತಿಯ ಗಾಳಿಯ ಗುಳ್ಳೆಗಳು ಹಿಟ್ಟಿನೊಳಗೆ ಇಲ್ಲದ ಹಾಗೆ ಮಿಶ್ರಣ ಮಾಡಿ.*ಕಾದ ತವಕ್ಕೆ ಆಲಿವ್ ಎಣ್ಣೆಯನ್ನು ಹಾಕಿ, ದೋಸೆಯ ಆಕಾರದಲ್ಲಿ ಹಿಟ್ಟನ್ನು ತವಾದ ಮೇಲೆ ಹಾಕಿ.ಸ್ವಲ್ಪ ಸಮಯ ಬೇಯಲು ಬಿಡಿ, ನಂತರ ಎಣ್ಣೆ ಸವರಿ ದೋಸೆಯನ್ನು ತಿರುವಿ ಹಾಕಿ, ಎರಡೂ ಕಡೆ ಸಮನಾಗಿ ಕಂದು ಬಣ್ಣಕ್ಕೆ ತಿರುಗುವವರೆಗೂ 30-40 ಸೆಕೆಂಡುಗಳು ಬೇಯಿಸಿ.
# ರಾಗಿ ಇಡ್ಲಿ : ಬೇಕಾಗಿರುವ ಸಾಮಗ್ರಿಗಳು > ರಾಗಿ ಹಿಟ್ಟು
ಮಾಡುವ ವಿಧಾನ : ಒಂದು ಪಾತ್ರೆಗೆ ರಾಗಿ ಹಿಟ್ಟನ್ನು ತೆಗೆದುಕೊಳ್ಳಿ, ಸ್ವಲ್ಪ ನೀರನ್ನು ಮಿಶ್ರಣ ಮಾಡಿ, ಇಡ್ಲಿ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿಕೊಳ್ಳಿ.ಇಡ್ಲಿ ಮಾಡುವ ಪಾತ್ರೆಯನ್ನು ತೆಗೆದುಕೊಂಡು ಸ್ವಲ್ಪ ತುಪ್ಪವನ್ನು ಸವರಿ, ಹಿಟ್ಟನ್ನು ಇಡ್ಲಿ ಬಟ್ಟಲಿನೊಳಗೆ ಹಾಕಿ.10-11 ನಿಮಿಷ ನೀರಿನ ಹವೆಯಲ್ಲಿ ಬೇಯಿಸಿ. ನಂತರ ಇಡ್ಲಿಯನ್ನು ಒಂದೊಂದಾಗೆ ಚಮಚದಿಂದ ತೆಗೆದು ತೆಂಗಿನಕಾಯಿ ಚಟ್ನಿಯೊಂದಿಗೆ ಸೇವಿಸಿ.
# ರಾಗಿ ಧೋಕ್ಲಾ : ಬೇಕಾಗುವ ಸಾಮಗ್ರಿಗಳು > 1. 1.5 ಬಟ್ಟಲಿನಷ್ಟು ರಾಗಿ ಹಿಟ್ಟು. 2. 1.5 ಬಟ್ಟಲಿನಷ್ಟು ಕಡ್ಲೆ ಹಿಟ್ಟು. 3. 1 ಚಮಚ ಆಲಿವ್ ಎಣ್ಣೆ. 4. 3/4 ಚಮಚದಷ್ಟು ಅರಿಶಿನ ಪುಡಿ. 5. 1 ಚಮಚ ಸಕ್ಕರೆ. 6. 3/4 ಚಮಚ ಖಾರದ ಪುಡಿ. 7. 2 ಚಿಟಿಕೆ ಹಿಂಗು. 8. 3 ಸಣ್ಣಗೆ ಹೆಚ್ಚಿದ ಹಸಿ ಮೆಣಸು. 9. 0.5 ಬಟ್ಟಲಿನಷ್ಟು ಮೊಸರು
ಮಾಡುವ ವಿಧಾನ : ಮೇಲೆ ಹೇಳಿರುವ ಸಾಮಗ್ರಿಗಳ್ಳನ್ನು ಒಂದು ಸಣ್ಣ ಪಾತ್ರೆಯಲ್ಲಿ ಹಾಕಿ(ಅರಿಶಿನ ಹಾಗು ಹಿಂಗನ್ನು ಹೊರತುಪಡಿಸಿ). 10-15 ನಿಮಿಷದ ನಂತರ ಕಲಸಿದ ಹಿಟ್ಟಿಗೆ ಅರಿಶಿನ ಹಾಗು ಹಿಂಗನ್ನು ಹಾಕಿ.ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಯಾವುದೇ ಗಾಳಿಯ ಗುಳ್ಳೆಗಳು ಇಲ್ಲದ ಹಾಗೆ ನೋಡಿಕೊಳ್ಳಿ ಒಂದು ತಟ್ಟೆಗೆ ಎಣ್ಣೆ ಅಥವಾ ತುಪ್ಪವನ್ನು ಸವರಿ, ಕಲಸಿದ ಹಿಟ್ಟನ್ನು ಅದರ ಮೇಲೆ ಹಾಕಿ. ಕುಕ್ಕರ್ ಒಳಗಡೆ ಸ್ವಲ್ಪ ನೀರನ್ನು ಹಾಕಿ, ತಟ್ಟೆ ಮುಳುಗದ ಹಾಗೆ, ಕುಕ್ಕರ್ ಒಳಗೆ ಕೂರಿಸಿ. ನಂತರ 8 ನಿಮಿಷದ ಕಾಲ ತಟ್ಟೆಯನ್ನು ನೀರಿನ ಹವೆಯಲ್ಲಿ ಬೇಯಿಸಿ. ಈಗ ತಯಾರಾದ ಧೋಕ್ಲಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಬೇಕಾಗುವ ಸಾಮಗ್ರಿಗಳು > 1. 0.5 ಬಟ್ಟಲಿನಷ್ಟು ರಾಗಿ ಹಿಟ್ಟು. 2. 1 ಬಟ್ಟಲಿನಷ್ಟು ನೀರು. 3. ಉಪ್ಪು ರುಚಿಗೆ ತಕ್ಕಷ್ಟು. 4. ಹಾಲು ಹಾಗು ತುಪ್ಪ.
ಮಾಡುವ ವಿಧಾನ : ಒಂದು ಪಾತ್ರೆಗೆ ಮೇಲೆ ಹೇಳಿದ ಸಾಮಾಗ್ರಿಗಳ್ಳನ್ನು ಹಾಕಿ, ಚೆನ್ನಾಗಿ ಯಾವುದೇ ಗಂಟುಗಳು ಇಲ್ಲದ ಹಾಗೆ ಕಲಸಿಕೊಳ್ಳಿ. ಕಲಸಿದ ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಸಣ್ಣ ಉರಿಯಲ್ಲಿ ಕುದಿಸಿ. ಯಾವುದೇ ಗಂಟುಗಳಾಗದ ಹಾಗೆ ಕಯ್ಯಾಡಿ. ಮಿಶ್ರಣವು ಗಟ್ಟಿಯಾಗುತ್ತಿದೆ ಎಂದು ತಿಳಿದಾಗ ಬೆಂಕಿಯ ಉರಿಯನ್ನು ಕಡಿಮೆ ಮಾಡಿ, ಮಿಶ್ರಣಕ್ಕೆ ತುಪ್ಪ ಸೇರಿಸಿ ಸೂಪ್ ರೀತಿ ಸೇವಿಸಿ.
ಸೇಬು ಹಾಗು ರಾಗಿಯ ಗಂಜಿ : ಬೇಕಾಗುವ ಸಾಮಗ್ರಿಗಳು > 1. 3 ಚಮಚ ರಾಗಿ, 2. ತುಪ್ಪ, 3. ಹಾಲು, 4. ಸೇಬು, 5. ಸಕ್ಕರೆ
ಮಾಡುವ ವಿಧಾನ : ಸೇಬಿನ ಹಣ್ಣನ್ನು ಸಣ್ಣಗೆ ಕತ್ತರಿಸಿ, ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ತವಕ್ಕೆ ತುಪ್ಪ ಹಾಕಿ, ಬಿಸಿಯಾದ ನಂತರ 3 ಚಮಚ ರಾಗಿ, ಸಕ್ಕರೆ ಹಾಗು ನೀರನ್ನು ಬೆರೆಸಿ ಸಾಧಾರಣ ಉರಿಯಲ್ಲಿ ಕುದಿಯಲು ಬಿಡಿ. ಮಿಶ್ರಣವನ್ನು ಚೆನ್ನಾಗಿ ಕುದಿಸಿ, ಗಂಟುಗಳಾಗದ ಹಾಗೆ ನೋಡಿಕೊಳ್ಳಿ. ಮಿಶ್ರಣ ಸ್ವಲ್ಪ ಗಟ್ಟಿಯಾದ ನಂತರ ಪಾತ್ರೆಯನ್ನು ಕೆಳಗೆ ಇಳಿಸಿ, 2 ನಿಮಿಷ ತಣ್ಣಗಾಗಲು ಬಿಡಿ. ಇದಕ್ಕೆ ಸೇಬಿನ ಮಿಶ್ರಣ, ತುಪ್ಪವನ್ನು ಹಾಕಿ ಸೇವಿಸಿ.