ಬೆಂಗಳೂರು, ಅ. 14 : ನಗರದ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಸಿಎಂ ಯಡಿಯೂರಪ್ಪ ಅವರ ಬೆಂಬಲಿಗ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿ ಕೊರಳ ಪಟ್ಟಿ ಹಿಡಿದು ಕಚೇರಿಯಿಂದಲೇ ಹೊರ ಹಾಕಿರುವ ಘಟನೆ ನಡೆದಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರ ಪ್ರೋಟೋಕಾಲ್ ನೋಡಿಕೊಳ್ಳುತ್ತಿದ್ದ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ ಆರೋಪಗಳು ಕೇಳಿ ಬರುತ್ತಿವೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುವ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಿಗ ಕಾರ್ಯಕರ್ತರು ಹಾಗೂ ಮುರಳೀಧರ್ ರಾವ್ ಅವರ ಸಿಬ್ಬಂದಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಕಿತ್ತಾಟ ಶುರುವಾಗಿದ್ದು ತಾರಕಕ್ಕೆ ಏರಿದೆ. ಕೊನೆಗೆ ರಾಜ್ಯದ ಪ್ರಮುಖ ಬಿಜೆಪಿ ನಾಯಕರ ಎದುರೇ ಬಿಎಸ್ವೈ ಬೆಂಬಲಿಗ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವ ಮುರಳೀಧರ್ ರಾವ್ ಸಿಬ್ಬಂದಿಗಳು ಆತನಿಗೆ ಕಪಾಳಮೋಕ್ಷ ಮಾಡಿ ಮತ್ತೆ ಕಚೇರಿಗೆ ಬರದಂತೆ ಧಮಕಿ ಹಾಕಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.