ನವದೆಹಲಿ ಮೇ.8, ನ್ಯೂಸ್ ಎಕ್ಸ್ ಪ್ರೆಸ್: ಇತ್ತೀಚಿಗೆ ಸಕ್ರಿಯ ರಾಜಕೀಯಕ್ಕೆ ಎಂಟ್ರಿಕೊಟ್ಟಿರುವ ಉತ್ತರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕಿಡಿಕಾರಿದ್ದಾರೆ. ದೆಹಲಿ ಎಎಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಿಯಾಂಕಗಾಂಧಿ ಅವರು ಲೋಕಸಭಾ ಚುನಾವಣೆಯ ಪ್ರಚಾರ ನಡೆಸುವ ಮೂಲಕ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಪ್ರಚಾರ ಮಾಡುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ) ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಪ್ರಿಯಾಂಕ ಗಾಂಧಿ ಹಾಗೂ ಸಹೋದರ ರಾಹುಲ್ ಗಾಂಧಿ ಅವರು ನೇರವಾಗಿ ಬಿಜೆಪಿ ವಿರುದ್ಧ ಸ್ಪರ್ಧೆ ಮಾಡುತ್ತಿರುವ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.