ಹೈದರಾಬಾದ್, ಏ. 1, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆ ಹೊತ್ತಲ್ಲಿಯೇ ಕಾಂಗ್ರೆಸ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಟಿಡಿಪಿ ನೇತೃತ್ವದ ಮೈತ್ರಿ ಟಿಆರ್ಎಸ್ ಎದುರು ಹೀನಾಯವಾಗಿ ಸೋಲು ಕಂಡಿತ್ತು. ಬಳಿಕ ಇಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಬೆನ್ನಲ್ಲೀಗ ಕಾಂಗ್ರೆಸ್ ಪ್ರಬಲ ನಾಯಕ ಬಿಜೆಪಿ ಸೇರಲು ಮುಂದಾಗಿದ್ದು, ಹೈಕಮಾಂಡ್ ಅನ್ನು ಚಿಂತೆಗೀಡು ಮಾಡಿದೆ. ತೆಲಂಗಾಣದಲ್ಲೀಗ ಪಕ್ಷಾಂತರ ಪರ್ವ ಜೋರಾಗಿದೆ. ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಪೊಂಗುಲೇಟಿ ಸುಧಾಕರ್ ರೆಡ್ಡಿ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅವರನ್ನು ಭೇಟಿ ಮಾಡಿರುವ ಸುಧಾಕರ್ ರೆಡ್ಡಿ, ಶೀಘ್ರದಲ್ಲಿಯೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಬಿರುಸಿನಿಂದ ಕೆಲಸ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಸುಧಾಕರ್ ರೆಡ್ಡಿ ಕಾಂಗ್ರೆಸ್ಸಿನ ಪ್ರಬಲ ನಾಯಕರಾಗಿದ್ದರು. ಇತ್ತೀಚೆಗಷ್ಟೇ ಓರ್ವ ಕಾಂಗ್ರೆಸ್ನಾಯಕ ಮತ್ತು ಶಾಸಕ ಡಿ.ಕೆ. ಅರುಣಾ ಬಿಜೆಪಿ ಸೇರಿದರು. ಈ ಬೆನ್ನಲ್ಲೇ ಮತ್ತೋರ್ವ ನಾಯಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ನಿರ್ಧರಿಸಿದ್ದು, ರಾಹುಲ್ ಪಡೆಗೆ ಭಾರೀ ಹಿನ್ನಡೆಯಾಗಿದೆ. ಈಗಾಗಲೇ ರೆಡ್ಡಿಯ ಕಾಂಗ್ರೆಸ್ ಸದಸ್ಯತ್ವದ ಅವಧಿ ಮುಕ್ತಾಯವಾಗಿದೆ. ಅಲ್ಲದೇ ಬಿಜೆಪಿ ಸೇರ್ಪಡೆ ಆಗುತ್ತಿರುವ ಎರಡನೇ ಕಾಂಗ್ರೆಸ್ ನಾಯಕರು ಇವರಾಗಿದ್ಧಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ರೆಡ್ಡಿ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಹಾಗೆಯೇ ಚುನಾವಣೆ ಟಿಕೆಟ್ಗಳನ್ನು ದುಡ್ಡಿಗಾಗಿ ಕಾಂಗ್ರೆಸ್ ಮಾರಾಟ ಮಾಡುತ್ತಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಕಳೆದ 40 ವರ್ಷಗಳಿಂದ ಕಾಂಗ್ರೆಸ್ಗಾಗಿ ದುಡಿದಿದ್ದೇನೆ. ಇಷ್ಟು ದಿನ ಸರಿಯಾಗಿದ್ದ ಪಕ್ಷವೀಗ ಬದಲಾಗಿದೆ. ಹಾಗಾಗಿ ಉತ್ತಮ ರಾಜಕೀಯ ಮಾಡಲು ಬಿಜೆಪಿ ಸೇರುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು.