ಬೆಂಗಳೂರು, ಮೇ. 15, ನ್ಯೂಸ್ ಎಕ್ಸ್ ಪ್ರೆಸ್: ಮುಂಬರುವ ಪಾಲಿಕೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ರಾಹುಲ್ ಗಾಂಧಿಯವರ ದೂರದೃಷ್ಟಿ ಮತ್ತು ಸಂಘಟನಾ ಯೋಜನೆ ಅನುಸಾರ ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಲ್ಲಿ ಕಟ್ಟಲು ಯೂತ್ ಕಾಂಗ್ರೆಸ್ ಸಜ್ಜಾಗಿದೆ. ಮುಂಬರುವ ಪಾಲಿಕೆ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡುವಂತಹ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪಕ್ಷವು ಪಕ್ಷ ಸಂಘಟನೆಯ ಕೆಲಸಕ್ಕೆ ಮುಂದಾಗಿದೆ. ಕಾಂಗ್ರೆಸ್ ಪಕ್ಷವನ್ನು ಜನರ ಬಳಿ ಕೊಂಡೊಯ್ಯಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವು ಬಿಳೇಕಹಳ್ಳಿಯಲ್ಲಿ ನಡೆಯಿತು. ಸಮಾವೇಶದಲ್ಲಿ ಯೂತ್ ಕಾಂಗ್ರೆಸ್ ನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
‘ಜನರ ಹಣ ಲೂಟಿ ಮಾಡಿದ್ದೇ ಮೋದಿ ಸಾಧನೆ’
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಬಿಳೇಕಹಳ್ಳಿ ನಾರಾಯಣ ‘ಐದು ವರ್ಷಗಳ ಕಾಲ ದೇಶದ ಜನರ ತೆರಿಗೆ ಹಣವನ್ನು ಲೂಟಿ ಮಾಡಿದ್ದೇ ನರೇಂದ್ರ ಮೋದಿಯ ಬಹುದೊಡ್ಡ ಸಾಧನೆಯಾಗಿದೆ. ಜನರನ್ನು ಭ್ರಮೆಗಳಲ್ಲಿ ಮುಳುಗಿಸಿ ದೇಶದ ಆರ್ಥಿಕತೆಯನ್ನು ಇಪ್ಪತ್ತು ವರ್ಷ ಹಿಂದಕ್ಕೆ ಹೊಯ್ದಿದ್ದಾರೆ’ ಎಂದು ಸೂರಿದರು. ಸೇನೆಯನ್ನು ಚುನಾವಣಾ ರಾಜಕಾರಣಕ್ಕೆ ಬಳಸಿಕೊಂಡು ಸಂವಿಧಾನಕ್ಕೆ ಅಪಚಾರ ಎಸಗಿರುವ ಮೋದಿಗೆ ದೇಶದ ಪ್ರಜ್ಞಾವಂತ ಜನ ತಕ್ಕ ಪಾಠ ಕಲಿಸಲಿದ್ದಾರೆ, ಮೋದಿ ನಿರುದ್ಯೋಗಿಯಾಗುವ ದಿನಗಳು ಸಮೀಪಸುತ್ತಿವೆ ಎಂದರು.
ಬಿಳೇಕಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ ನಾರಾಯಣ, ಕಾಂಗ್ರೆಸ್ ಮುಖಂಡರಾದ ವರ್ಗೀಸ್, ಕೃಷ್ಣಪ್ಪ, ಯೂತ್ ಕಾಂಗ್ರೆಸ್ ಅಧ್ಯಕ್ಷ ತ್ಯಾಗರಾಜ್, ವಂಸತ್ ಹಾಗೂ ಬಾಲ ಪ್ರದೀಪ್ ಮುಂತಾದವರು ಪಾಲ್ಗೊಂಡಿದ್ರು.