ಬೆಂಗಳೂರು, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಯುಗಾದಿ ಹಬ್ಬದ ಮರುದಿನ ಆಚರಿಸುವ ಹೊಸತೊಡಕಿಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಪಾಪಣ್ಣ ಮಟನ್ ಸ್ಟಾಲ್ ಗೆ ಸ್ಥಳೀಯರು ಮುಗಿಬಿದ್ದಿದ್ದು ಈಗ ದೊಡ್ಡ ಸುದ್ದಿಯಾಗಿದೆ. ಏ.6 ರ ಶನಿವಾರ ಯುಗಾದಿ ಹಬ್ಬ ಮುಗಿದ ಮರುದಿನ ನಡೆದ ಹೊಸತೊಡಕಿಗೆ ಈ ಸ್ಥಳೀಯ ಮಟನ್ ಸ್ಟಾಲ್ ಮುಂದೆ ಭಾನುವಾರ ಬೆಳಗ್ಗಿನ ಜಾವ 2 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಜನ ಮಟನ್ ಗಾಗಿ ಕ್ಯೂ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ತಾಗೆ ವೈರಲ್ ಆಗಿದೆ.
ಅಂದು ಒಂದೇ ದಿನ ಪಾಪಣ್ಣ ಮಟನ್ ಅಂಗಡಿಯಲ್ಲಿ 600 ಕೆಜಿ ಮಟನ್ ಮಾರಾಟವಾಗಿದೆಯಂತೆ. ಅಂದರೆ 50 ಕುರಿಗಳ ಮಟನ್ ಮಾರಾಟವಾಗಿದೆ. ಈ ಕುರಿತು ಮಟನ್ ಅಂಗಡಿಯ ಮಾಲೀಕ ಸಂತೋಷ್ ಮಾತನಾಡಿ, ನಮ್ಮ ಗ್ರಾಹಕರಿಗೆ ಮಟನ್ ನಲ್ಲಿ ದೊರೆಯುವ ಬಿಡಿಭಾಗಗಳನ್ನ ಆಯ್ಕೆ ಮಾಡಲು ಮುಕ್ತವಾಗಿರಿಸಿದ್ದೆವು. ಆದರೆ ಬೇರೆ ಅಂಗಡಿಯವರು ಈ ಆಯ್ಕೆಯನ್ನ ಗ್ರಾಹಕರಿಗೆ ನೀಡುವುದಿಲ್ಲ. ಹಾಗಾಗಿ ಗ್ರಾಹಕರು ಈ ಸೇವೆಗೆ ನಮ್ಮ ಅಂಗಡಿಗೆ ಇಷ್ಟಪಟ್ಟು ಬರುತ್ತಾರೆ ಎಂದು ತಿಳಿಸುತ್ತಾರೆ. ಹೊಸತೊಡಕು ಸಂದರ್ಭದಲ್ಲಿ ಮಟನ್ ಅಂಗಡಿಗಳು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದಾಗ ಪಾಪಣ್ಣ ಮಟನ್ ಸ್ಟಾಲ್ ಸಾಮಾನ್ಯ ದರದಲ್ಲೆ ಮಾರಾಟ ಮಾಡಿದ್ದು ಸಹ ಗಮನಾರ್ಹ.