ಬೆಂಗಳೂರು: ಲೋಕಸಭಾ ಚುನಾವಣೆ
ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್, ‘ಕನ್ನಡ’ದಲ್ಲಿ ಹೊಸ ಪತ್ರಿಕೆ ಹೊರತರಲು
ನಿರ್ಧರಿಸಿದೆ. ‘ನಮ್ಮ ಕಾಂಗ್ರೆಸ್’ ಎನ್ನುವ ಹೆಸರಿನಲ್ಲಿ ಈ ಪತ್ರಿಕೆ ಸದ್ಯದಲ್ಲೇ
ಆರಂಭವಾಗಲಿದೆ.
ಚುನಾವಣೆಗೆ
ಇನ್ನು 3 ತಿಂಗಳು ಬಾಕಿರುವ ಈ ಹೊತ್ತಿನಲ್ಲಿ, ತಮ್ಮ ಪಕ್ಷದ ಸಾಧನೆ ಮತ್ತು ಮೋದಿ ಸರಕಾರದ
ವೈಫಲ್ಯತೆಯನ್ನು ಜನರಿಗೆ ತಲುಪಿಸುವಲ್ಲಿ ಈ ಪತ್ರಿಕೆ ಕೆಲಸ ಮಾಡಲಿದ್ದು, ಇದೇ ಬರುವ ಬುಧವಾರ (ಫೆ.6)
ಮೊದಲ ಸಂಚಿಕೆ ಹೊರಬರಲಿದೆ.
ಕನ್ನಡದ ಕೆಲವು ಮಾಧ್ಯಮಗಳು ಬಿಜೆಪಿ ಪರ ನಿಲುವನ್ನು ಹೊಂದಿರುವುದರಿಂದ, ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗಬಾರದು ಎನ್ನುವ ನಿಟ್ಟಿನಲ್ಲಿ, ಪಕ್ಷದ ಒಡೆತನದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ರೀತಿಯಲ್ಲಿ, ಇದು ಕೆಲಸ ನಿರ್ವಹಿಸಲಿದೆ. ‘ನಮ್ಮ ಕಾಂಗ್ರೆಸ್’ ಪಾಕ್ಷಿಕವಾಗಿ (15 ದಿನಕ್ಕೊಮ್ಮೆ) ಹೊರಬರಲಿದ್ದು, ಪ್ರತೀ ಸಂಚಿಕೆಯಲ್ಲಿ ರಾಜ್ಯದ ಪ್ರಮುಖ ಕಾಂಗ್ರೆಸ್ ಮುಖಂಡರ ಅಭಿಪ್ರಾಯವನ್ನೂ ಹೊತ್ತು ತರಲಿದೆ.
ಮೋದಿ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುವುದೇ ಪತ್ರಿಕೆಯ ಮೂಲ ಉದ್ದೇಶ. ನಮ್ಮ ಕಾಂಗ್ರೆಸ್ ಪಾಕ್ಷಿಕವನ್ನು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎನ್ನುವ ಫರ್ಮಾನನ್ನು ಕೆಪಿಸಿಸಿ ಅಧ್ಯಕ್ಷರು ಹೊರಡಿಸುವ ಸಾಧ್ಯತೆಯಿದೆ.
ಕಳೆದ ಏಳು ದಶಕಗಳಲ್ಲಿ ದೇಶಕ್ಕೆ ಮತ್ತು ರಾಜ್ಯಕ್ಕೆ ಕಾಂಗ್ರೆಸ್ ಸರಕಾರದ ಕೊಡುಗೆ, ಪಕ್ಷಕ್ಕಾಗಿ ದುಡಿದವರು, ರಾಜಕೀಯ ವಿಶ್ಲೇಷಣೆ, ವಿರೋಧ ಪಕ್ಷಗಳ ವೈಫಲ್ಯತೆ ಮುಂತಾದವುಗಳು, ಕಾಂಗ್ರೆಸ್ಸಿನ ಹೊಸ ಪಾಕ್ಷಿಕ ಪತ್ರಿಕೆಯಲ್ಲಿ ಇರಲಿದೆ.