ಬೆಂಗಳೂರು, ಅ. 14: ರಾಜಧಾನಿಯ ಯೋಜಿತ ಅಭಿವೃದ್ಧಿ ಮತ್ತು ದೂರದೃಷ್ಟಿಯ ಯೋಜನೆಗಳ ನೀಲ ನಕ್ಷೆ ರೂಪಿಸುವ ಉದ್ದೇಶದಿಂದ ರಚನೆಯಾಗಿರುವ ಮಹಾನಗರ ಯೋಜನಾ ಸಮಿತಿ (ಬಿಎಂಪಿಸಿ) ಕಳೆದ ಐದು ವರ್ಷಗಳಲ್ಲಿ ನಡೆಸಿರುವುದು ಕೇವಲ ಎರಡು ಸಭೆ.
ನಗರಾಭಿವೃದ್ಧಿ ಖಾತೆಯ ಹೊಣೆ ಹೊತ್ತಿರುವ, ನಗರದ ಅಭಿವೃದ್ಧಿ ಬಗ್ಗೆ ಅಪಾರ ನಿರೀಕ್ಷೆಗಳನ್ನು ಹೊಂದಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಬಿಎಂಪಿಸಿ ಸಭೆ ನಡೆಸುವರೇ ಎಂಬ ನಿರೀಕ್ಷೆ ಗರಿಗೆದರಿದೆ ಆದರೂ ಸಿಎಂ ಪಕ್ಷದವರೇ ಕಾಲೆಳೆಯುತ್ತಿರುವುದು ಕೂಡಾ ನಗರದ ಅಭಿವೃದ್ದಿ ಯೋಜನೆಗಳ ಕಡೆ ನಿಗಾವಹಿಸಲಾಗುತ್ತಿಲ್ಲ ಎಂಬುದು ಯೋಜನಾ ಸಮಿತಿಯ ಆರೋಪ.
ಪ್ರಸಕ್ತ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಡ್ಡಾದಿಡ್ಡಿ ಕಾಮಗಾರಿಗಳು, ಅದರಿಂದಾಧಿಗುತ್ತಿರುವ ಅಪಾರ ತೊಂದರೆಗಳಿಗೆ ಯೋಜನೆ ರೂಪಿಸುವಲ್ಲಿ ಉತ್ಸಾಹದ ಕೊರತೆ ಕಾರಣ ಎಂಬ ದೂರಿದೆ. ಈ ನಿಟ್ಟಿನಲ್ಲಿ ಬಿಎಂಪಿಸಿಯ ಪಾತ್ರ ಪ್ರಧಾನವಾಗಿದೆ. ಹಾಗಾಗಿ, ಬಿಎಂಪಿಸಿ ಸಭೆ ಕರೆದು ನಗರದ ಅಭಿವೃದ್ಧಿ ಸಂಬಂಧಿಸಿದಂತೆ ಚರ್ಚೆ ನಡೆಸುತ್ತಾರೆ ಎಂದು ನಗರ ಯೋಜನಾ ತಜ್ಞರು ಹಾಗೂ ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಎದುರು ನೋಡುತ್ತಿದ್ದಾರೆ.
ಯೋಜನಾ ಪ್ರಾಧಿಕಾರ ರಚನೆಗೆ ಚಿಂತನೆ
ಬಿಎಂಪಿಸಿ ರಚನೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್ನಲ್ಲಿ ಬಾಕಿ ಇದೆ. ಸರಕಾರವು ವಿಚಾರಣೆ ವೇಳೆ ಕುಂಟು ನೆಪಗಳನ್ನೊಡ್ಡಿ ಅರ್ಜಿಯನ್ನು ಮುಂದೂಡಿಸಿಕೊಳ್ಳುತ್ತಿದೆ.
ಸಮಿತಿಯಲ್ಲಿ ಯಾರಿದ್ದಾರೆ
ಪ್ರಸ್ತು ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರು ಉಪಾಧ್ಯಕ್ಷ. ಬೆಂಗಳೂರಿನ ಎಲ್ಲ ಶಾಸಕರು, ಸಂಸದರು,ಪಾಲಿಕೆಯಿಂದ ಚುನಾಯಿತರಾದ 18 ಮಂದಿ ಸದಸ್ಯರು ಸೇರಿ ಒಟ್ಟು 88 ಮಂದಿ ಸದಸ್ಯರಿರುತ್ತಾರೆ. ಹಾಲಿ ನಗರದ 5 ಶಾಸಕರು ಅನರ್ಹರಾಗಿರುವ ಕಾರಣ ಐದು ಸದಸ್ಯರ ಸಂಖ್ಯೆ ಖಾಲಿ ಇವೆ. ಬಿಎಂಪಿಸಿ ರಚನೆಯಾದಾಗಿನಿಂದ ನಾಮಕಾವಸ್ತೆಗೆನ್ನುವಂತೆ ಎರಡು ಸಭೆಗಳು ಮಾತ್ರ ನಡೆದಿವೆ.
ಬಿಎಂಪಿಸಿ ಸಭೆ ನಡೆಯದಿರುವ ವಿಷಯ ಸಿಎಂ ಗಮನಕ್ಕೆ ಬಂದಿದೆ. ನೆರೆ ಪರಿಹಾರಧಿಲ್ಲಿ ತೊಡಗಿದ ಕಾರಣ ಸಭೆ ನಡೆಸಿಲ್ಲ. ನವೆಂಬರ್ ಅಥವಾ ಡಿಸೆಂಬರ್ ಒಳಗೆ ಮಹಾನಗರ ಯೋಜನಾ ಸಮಿತಿ ಸಭೆ ನಡೆಸುವ ವಿಶ್ವಾಸವಿದೆ.
ಚರ್ಚೆಯ ಪ್ರಮುಖ ವಿಷಯ
ಮಹಾನಗರ ಕ್ರಿಯಾ ಯೋಜನೆ 2031 ಅಂತಿಮ, ಬಿಗಡಾಯಿಸಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ನಿವಾರಣೆ, ರಸ್ತೆ, ಗುಂಡಿಗಳನ್ನು ಮುಚ್ಚಲು ಕ್ರಮ, ಸಂಚಾರ ದಟ್ಟಣೆ ತಪ್ಪಿಸಲು ಸಮಗ್ರ ಕಾರ್ಯಯೋಜನೆ.
ಬೆಳ್ಳಂದೂರು ಕೆರೆ ನೊರೆ ಸಮಸ್ಯೆಗೆ ಶಾಶ್ವತ ಪರಿಹಾರ.
ಮಹಾನಗರದ ಆಡಳಿತ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳುವುದು. ನಗರ ಯೋಜನೆ ಸಂಬಂಧ ಪ್ರತಿ ಐದು ವರ್ಷಕ್ಕೊಮ್ಮೆ ಕರಡು ಅಭಿವೃದ್ಧಿ ಯೋಜನೆ ರೂಪಿಸುವುದು.
ನಗರ ಯೋಜನೆಗಳಲ್ಲಿ ಸಾರ್ವಜನಿಕರ ಅಭಿಪ್ರಾಯ ಮತ್ತು ಸಹಭಾಗಿತ್ವಕ್ಕೆ ಒತ್ತು ನೀಡುವಿಕೆ. ನಗರಾಭಿವೃದ್ಧಿಯ ನೀಲನಕ್ಷೆ, ಮೂಲ ಸೌಕರ್ಯ ವೃದ್ಧಿ, ನಗರ ಸಾರಿಗೆ, ಮಾಲಿನ್ಯ ನಿಯಂತ್ರಣ. ನಗರದ ಅಭಿವೃದ್ದಿ ಪೂರಕ ಅಗತ್ಯ ಯೋಜನೆಗಳನ್ನು ರೂಪಿಸುವುದು. ನಗರಾಡಳಿತ ಸಂಸ್ಥೆಗಳು ಸಲ್ಲಿಸುವ ಅಭಿವೃದ್ಧಿ ಯೋಜನೆಗಳನ್ನು ಪರಿಷ್ಕರಿಸಿ ಅಂತಿಮಗೊಳಿಸುವುದು. ಮಾಹೆವಾರು ಹಿಂದಿನ ಅಭಿವೃದ್ಧಿ ಯೋಜನೆಗಳ ಭೌತಿಕ ಮತ್ತು ಆರ್ಥಿಕ ಪ್ರಗತಿ ಪರಿಶೀಲನೆ ಸಭೆ ನಡೆಸುವುದು. ಸ್ಥಳೀಯ ಅಭಿವೃದ್ಧಿ ಯೋಜನೆಗಳಿಗಾಗಿ ನಗರಾಡಳಿತ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡುವ ಏಜೆನ್ಸಿಯೊಂದಿಗೆ ನಿರಂತರ ಸಹಕಾರ ಮತ್ತು ಚರ್ಚೆಯಲ್ಲಿರುವುದು.