ತಮಿಳುನಾಡು, ಏ. 27, ನ್ಯೂಸ್ ಎಕ್ಸ್ ಪ್ರೆಸ್: ಸರ್ಕಾರಿ ಆಸ್ಪತ್ರೆಯ ನಿವೃತ್ತ ನರ್ಸ್ ಒಬ್ಬಳು ಕಳೆದ 30 ವರ್ಷದಿಂದ ಆಸ್ಪತ್ರೆಯಲ್ಲಿ ಹುಟ್ಟಿದ ಹಸುಗೂಸುಗಳನ್ನ ಕದ್ದು ಮಾರಾಟ ಮಾಡುತ್ತಿರುವ ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ. ತಮಿಳುನಾಡಿನ ನಮಕ್ಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡಿಕೊಂಡು ಬರುತ್ತಿದ್ದ ಅಮೃತ ಎಂಬುವರು ಆಡಿಯೋ ಟೇಪ್ ನಲ್ಲಿ ತಾನು ಕಳೆದ 30 ವರ್ಷದಿಂದ ಮಕ್ಕಳನ್ನ ಕದ್ದು ಮಾರಾಟ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಬೀಲ ರಾಜೇಶ್ ಗ್ರಾಮೀಣಾಭಿವೃದ್ದಿ ಮತ್ತು ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಆಡಿಯೋ ಟೇಪ್ ಕುರಿತು ಕೂಲಂಕುಶವಾದ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಆಡಿಯೋ ಟೇಪ್ ನಲ್ಲಿ ನರ್ಸ್ ಅಮೃತ ಒಂದು ಹೆಣ್ಣು ಮಗುವಿಗೆ 2.75 ಲಕ್ಷ ರೂ. ಅದರಲ್ಲೂ ಸುಂದರವಾಗಿರುವ ಮಗುವಿಗೆ 3 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾಳೆ. ಗಂಡು ಮಗುವಿಗೆ 3 ಲಕ್ಷದಿಂದ 4 ಲಕ್ಷದವರೆಗೆ ಮಾರಾಟ ಮಾರಿರುವುದಾಗಿ ಹೇಳಿಕೊಂಡಿದ್ದಾಳೆ. ಜನನ ಪತ್ರ ಬೇಕು ಎಂಬುವವರಿಗೆ 70 ಸಾವಿರ ರೂ. ಹಣ ಅಧಿಕವಾಗಿ ಸ್ವೀಕರಿಸಿರುವುದಾಗಿ ಹೇಳಿಕೊಂಡಿದ್ದಾಳೆ. ಆಕೆಯ ಗಂಡ ಆಂಬ್ಯುಲೆನ್ಸ್ ಚಾಲಕವೆಂದು ಹೇಳಿಕೊಂಡಿದ್ದಾಳೆ. ಈ ಹಿಂದೆಯೂ ನರ್ಸ್ ಅಮೃತ ಆಸ್ಪತ್ರೆಯ ಸಿಬ್ಬಂದಿಯ ಸಹಾಯದೊಂದಿಗೆ ಮಕ್ಕಳನ್ನ ಕದ್ದು ಮಾರಾಟ ಮಾಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಮಹಿಳಾ ನರ್ಸ್ ಸ್ವಯಂ ನಿವೃತ್ತಿ ಘೋಷಿಸಿದ್ದರು.