ಬೆಂಗಳೂರು, ನ. 09: ಅಯೋಧ್ಯೆ ವಿವಾದದಲ್ಲಿ ಸುಪ್ರೀಂ ಕೋರ್ಟ್ ಇಂದು ಏನೇ ತೀರ್ಪು ನೀಡಿದರೂ ಸಮಾಧಾನ ಮತ್ತು ಸಮಚಿತ್ತದಿಂದ ಸ್ವೀಕರಿಸುವಂತೆ ಹಿಂದೂ ಮತ್ತು ಮುಸ್ಲಿಮ್ ಸಮುದಾಯದ ಮುಖಂಡರು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಗಳು ತನ್ನ ಕಾರ್ಯಕರ್ತರಿಗೆ ಯಾವುದೇ ವಿಜಯೋತ್ಸವ ಅಥವಾ ಪ್ರತಿಭಟನೆಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿವೆ. ಧರ್ಮಗುರುಗಳೂ ಕೂಡ ಶಾಂತಿ ಪರಿಪಾಲನೆ ಮಾಡುವಂತೆ ತಮ್ಮ ಸಮುದಾಯಗಳನ್ನು ಕೋರಿಕೊಂಡಿದ್ದಾರೆ.
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ಧಾರೆ. ಅಲ್ಲಿಯವರೆಗೆ ಸುಪ್ರೀಂ ಕೋರ್ಟ್ ತೀರ್ಪು ಏನೇ ಬಂದರೂ ಯಾರೂ ಏನೂ ಮಾತನಾಡಬಾರದು ಎಂದು ಸಂಘ ಪರಿವಾರದ ಮುಖ್ಯಸ್ಥರು ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತೀರ್ಪು ತೃಪ್ತಿದಾಯಕವಾಗಿದ್ದರೆ ತಮ್ಮ ತಮ್ಮ ಮನೆಗಳಲ್ಲಿ ತುಪ್ಪದ ದೀಪ ಹಚ್ಚಿ ಭಜನೆ ಮಾಡಿ. ಯಾವುದೇ ವಿಜಯೋತ್ಸವ ಆಚರಣೆ ಬೇಡ, ಪಟಾಕಿ ಹೊಡೆಯುವುದು ಬೇಡ. ಒಂದು ವೇಳೆ ತೀರ್ಪು ವ್ಯತಿರಿಕ್ತವಾಗಿ ಬಂದರೆ ಪ್ರತಿಭಟನೆ ಅಥವಾ ಧರಣಿ ಮಾಡಬೇಡಿ. ಮೋಹನ್ ಭಾಗವತ್ ಪ್ರತಿಕ್ರಿಯಿಸುವವರೆಗೂ ಸುಪ್ರೀಂ ತೀರ್ಪಿನ ಬಗ್ಗೆ ಯಾರೂ ಮಾತನಾಡಬಾರದು.