ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ನಿಮ್ಹಾನ್ಸ್ ತರಬೇತಿ

ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ನಿಮ್ಹಾನ್ಸ್ ತರಬೇತಿ

ಬೆಂಗಳೂರು, ಅ. 17: ಕಾಲೇಜುಗಳ ಚುರುಕಾಗಿರುವ ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ತಡೆ ಕುರಿತು ತರಬೇತಿ ನೀಡಿ ಹದಿಹರೆಯದ ವಯಸ್ಸಿನವರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಮಾಣ ತಗ್ಗಿಸಲು ನಿಮ್ಹಾನ್ಸ್ ಮಾನಸಿಕ ಶಿಕ್ಷಣ ವಿಭಾಗ ಕಾರ್ಯೋನ್ಮುಖವಾಗಿದೆ.

ಪ್ರತಿ ಕಾಲೇಜುನಲ್ಲಿ 18 ರಿಂದ 20 ವಿದ್ಯಾರ್ಥಿಗಳಿಗೆ ಪೀರ್ ಲೀಡರ್ ಆಯ್ಕೆ ಮಾಡಿ ಮೂರು ದಿನಗಳ ಕಾಲ ತಡಬೇತಿ ನೀಡಿ ಅವರುಗಳ ಮೂಲಕ ಕಾಲೇಜು ವ್ಯಾಪ್ತಿಯಲ್ಲಿ ಹಾಗೂ ಸ್ನೇಹಿತ ಬಳಗದ ಯುವಕ ಯುವತಿಯರಲ್ಲಿ ಕಂಡು ಬರುವ ಆತ್ಮಹತ್ಯೆ ಆಲೋಚನೆ ಮನಸ್ಥಿತಿಯನ್ನೇ ಹೋಗಲಾಡಿಸಲು ಚಿಂತನೆ ನಡೆಸಿದೆ.

ಕಾರ್ಯಕ್ರಮದ ಸಾಧಕ-ಬಾಧಕ ತಿಳಿಯುವ ನಿಟ್ಟಿನಲ್ಲಿ ನಿಮ್ಹಾನ್ಸ್ ಪ್ರಾಯೋಗಿಕವಾಗಿ ನಗರದ ಎರಡು ಕಾಲೇಜುಗಳ ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ತಡೆ ತರಬೇತಿ ನೀಡುತ್ತಿದೆ. ತರಬೇತಿ ಪಡೆದ ಕಾಲೇಜು ವಿದ್ಯಾರ್ಥಿಗಳ ಚಟುವಟಿಕೆ ಹಾಗೂ ಪಾಲ್ಗೊಳ್ಳುವಿಕೆ ಆಧರಿಸಿ ಮುಂದಿನ ವರ್ಷದಿಂದ ಆರೋಗ್ಯ ಇಲಾಖೆ ಸಹಯೋಗದೊಂದಿಗೆ  ನಗರದ ಎಲ್ಲಾ ಕಾಲೇಜುಗಳಲ್ಲಿಯೂ ಕಾರ್ಯಕ್ರಮ ಅನುಷ್ಟಾನಗೊಳಿಸಲಾಗುವುದು.

ನಗರ ಮುಂಚೂಣಿಯಲ್ಲಿ

ಆತ್ಮಹತ್ಯೆಯಲ್ಲಿ ಮುಂಚೂಣಿಯಲ್ಲಿದ್ದು, ನಗರ ವ್ಯಾಪ್ತಿಯಲ್ಲಿ 2017 ರಿಂದ 2019 ಆಗಷ್ಟ್ ರೆಗೆ ಒಟ್ಟು 5,232 ಮಂದಿ ಆತ್ಮಹತ್ಯೆ ಪ್ರಕರಣ ದಾಖಲಾಗಿವೆ. ಇತ್ತೀಚಿನ ದಿನಗಳಲ್ಲಿ 16 ರಿಂದ 21 ವರ್ಷದೊಳಗಿನವರಲ್ಲಿಯೇ ಆತ್ಮಹತ್ಯೆ ಪ್ರಮಾಣ ಹೆಚ್ಚಳವಾಗಿದೆ. ಪ್ರಮುಖವಾಗಿ ಹದಿಹರೆಯದ ವಯಸ್ಸಿನವರು ಹೆಚ್ಚಾಗಿ ಸ್ನೇಹಿತರೊಟ್ಟಿಗೆ ಬೆರೆಯುತ್ತಾರೆ.

ತಮ್ಮ ಭಾವನೆಗಳನ್ನು ಪೋಷಕರು, ಶಿಕ್ಷಕರುಗಳಿಗಿಂತಲೂ ಸ್ನೇಹಿತರ ಬಳಿಯೇ ಹಂಚಿಕೊಳ್ಳುತ್ತಾರೆ. ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಚುರುಕಾಗಿ ಹಾಗೂ ಪರಿಣಾಮಕಾರಿ ಆತ್ಮಹತ್ಯೆ ತಡೆಗಟ್ಟಲು ನಿಮ್ಹಾನ್ಸ್ ಮುಂದಾಗಿದೆ.

ಹದಿಹರೆಯದವರು ಹೆಚ್ಚಾಗಿ ಕಾಲೇಜು ಅಥವಾ ಮನೆಯ ಸಮೀಪದ ಸೇಹಿತರ ಜತೆ ಬೆರೆಯುತ್ತಾರೆ. ತಮ್ಮ ನೋವು ನಲಿವುಗಳನ್ನು ಅವರೊಟ್ಟಿಗೆ ಹಂಚಿಕೊಳ್ಳುತ್ತಾರೆ. ಸ್ನೇಹಿತನೊಬ್ಬ ಸಾವಿನ ಬಗ್ಗೆ ಮಾತನಾಡುತ್ತಿದ್ದಾನೆ, ಜಿಗುಪ್ಸೆ ಬಂದಿದೆ ಎನ್ನುತ್ತಿದ್ದಾನೆ, ಅವನಲ್ಲಿ ಆತ್ಮಹತ್ಯೆ ಆಲೋಚನೆ ಬಂದಿವೆ ಎಂದಾಗ ಆ ಸಂದರ್ಭವನ್ನು ಸೂಕ್ತವಾಗಿ ನಿರ್ವಹಿಸುವ ಶಕ್ತಿ ಇರಬೇಕಾಗುತ್ತದೆ. ಇದಕ್ಕಾಗಿಯೇ ಕಾಲೇಜಿನಲ್ಲಿ ಚಟುವಟಿಕೆಯಿಂದಿರುವ, ಚುರುಕಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.

ತರಬೇತಿಯಲ್ಲಿ ಏನಿರುತ್ತೆ

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೂರು ದಿನಗಳ ತರಬೇತಿಯನ್ನು ನಿಮ್ಹಾನ್ಸ್ ವೈದ್ಯರು, ಪ್ರಾಧ್ಯಾಪಕರು ನೀಡುತ್ತಾರೆ. ಮೊದಲು ಆತ್ಮಹತ್ಯೆ ಎಂದರೇನು, ಅದರ ಪರಿಣಾಮಗಳೇನು, ಸಮಾಜಕ್ಕಾಗುತ್ತಿರುವ ನಷ್ಟವೆಷ್ಟು ಎಂಬ ಅಂಶವನ್ನು ತಿಳಿಸಲಾಗುತ್ತಿದೆ. ಬಳಿಕ ಆತ್ಮಹತ್ಯೆಗೆ ಕಾರಣಗಳೇನಿರಬಹುದು, ಲಕ್ಷಣಗಳೇನು, ಸ್ನೇಹಿತರಲ್ಲಿ ಆ ಲಕ್ಷಣಗಳು ಕಂಡು ಬಂದರೆ, ಅಂತಹ ಸಂದರ್ಭವನ್ನು ಹೇಗೆ ನಿರ್ವಹಣೆ ಮಾಡಬೇಕು.

ಆತ್ಮಹತ್ಯೆ ಪ್ರವೃತ್ತಿ ಕಂಡುಬರುವವರ ಬಳಿ ಸಮಾಧಾನದ ಮಾತುಗಳನ್ನಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಕಾಲೇಜಿನಲ್ಲಿ ಆತ್ಮಹತ್ಯೆ ತಡೆ ಕುರಿತು ಜಾಗೃತಿ ಮೂಡಿಸಲು ನಾಟಕ, ಕರಪತ್ರ, ಭಿತ್ತಿಪತ್ರ ಸಿದ್ಧಪಡೆಸುವ ಕುರಿತು ಹೇಳಿಕೊಡಲಾಗುತ್ತದೆ ಎಂದು ಸಾವಿತ್ರಿ ನಿವೃತ್ತ ನಿಮ್ಹಾನ್ಸ್ ಉಪನಿರ್ದೇಶಕಿ ತಿಳಿಸದ್ದಾರೆ.

ಹದಿಹರೆಯದರಲ್ಲಿ ಆತ್ಮಹತ್ಯೆ ತಡೆಯಲು ಕಾಲೇಜು ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ತಡೆ ಕುರಿತ ತರಬೇತಿ ನೀಡಲು ನಿಮ್ಹಾನ್ಸ್ ಮುಂದಾಗಿದೆ. ಭಾರತದಲ್ಲಿಯೆ ಮೊದಲ ಬಾರಿಗೆ ಇಂತಹ ಪ್ರಾಯೋಗಿಕ ಯೋಜನೆಯೊಂದನ್ನು ನಿಮ್ಹಾನ್ಸ್ ಕೈಗೆತ್ತಿಕೊಂಡಿದ್ದೇ. ಕಾಲೇಜುಗಳು ಹಾಗೂ ತಜ್ಞರಿಂದ ಉತ್ತಮ ಅಭಿಪ್ರಾಯ ಕೇಳಿಬಂದಿದೆ ಎಂದು ಡಾ.ಕೆ.ಎಸ್.ಮೀನಾ, ಸಹಾಯಕ ಪ್ರಾಧ್ಯಾಪಕಿ, ಮಾನಸಿಕ ಆರೋಗ್ಯ ಶಿಕ್ಷಣ ವಿಭಾಗ, ನಿಮ್ಹಾನ್ಸ್ ಅವರು ತಿಳಿಸಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos