ದೇವನಹಳ್ಳಿ, ಆ. 23: ತಾಲೂಕು ತಹಶೀಲ್ದಾರ್ ಆಗಿ ಅಜಿತ್ ರೈ ನಗರದ ಮಿನಿವಿಧಾನಸೌಧದಲ್ಲಿ ಅಧಿಕಾರ ಸ್ವೀಕರಿಸಿದರು.
ತಹಶೀಲ್ದಾರ್ ಆಗಿದ್ದ ಕೇಶವಮೂರ್ತಿ ಜುಲೈ 30 ರಂದು ನಿವೃತ್ತಿ ಹೊಂದಿದ್ದರು. ಪ್ರಭಾರ ತಹಶೀಲ್ದಾರ್ ಆಗಿ ಬಾಲಕೃಷ್ಣ ಕಾರ್ಯನಿರ್ವಹಿಸುತ್ತಿದ್ದರು. ಸರ್ಕಾರ ಅಜಿತ್‌ರೈ ಅವರನ್ನು ದೇವನಹಳ್ಳಿ ತಹಶೀಲ್ದಾರ್ ಆಗಿ ನೇಮಕ ಮಾಡಿದೆ.
ನೂತನ ತಹಶೀಲ್ದಾರ್ ಅಜಿತ್ ರೈ ಮಾತನಾಡಿ, ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಪ್ರತಿ ಜನರಿಗೆ ತಲುಪುವಂತೆ ಮಾಡಲಾಗುವುದು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮೂಲಭೂತ ಸೌಲಭ್ಯಗಳು ಸಿಗುವಂತೆ ಆಗಬೇಕು. ಕಾನೂನು ಚೌಕಟ್ಟಿನಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿರಸ್ಥೆದಾರ್ ಬಾಲಕೃಷ್ಣ, ಪುರಸಭಾ ಸದಸ್ಯ ಜಿ.ಎ.ರವೀಂದ್ರ, ಕಾಂಗ್ರೆಸ್ ಮುಖಂಡ ಶಾಂತಕುಮಾರ್, ಡಿ.ಸಿ.ಚಂದ್ರು, ಗ್ರಾಪಂ ಸದಸ್ಯ ಕೆಂಪಣ್ಣ, ಮತ್ತಿತರರು ಇದ್ದರು.