ಮಂಡ್ಯ, ಏ. 9, ನ್ಯೂಸ್ ಎಕ್ಸ್ ಪ್ರೆಸ್: ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಷ್ ಬಗ್ಗೆ ಹಾಗೂ ಅವರ ಪರ ಪ್ರಚಾರಕ್ಕೆ ಬರುತ್ತಿರುವ ಯಶ್-ದರ್ಶನ್ ವಿರುದ್ಧ ಮೈತ್ರಿ ಪಕ್ಷಗಳ ನಾಯಕರು ದಿನಕ್ಕೊಂದು ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳ ವಿಚಾರವಾಗಿ ಮಾತನಾಡಿರುವ ಸುಮಲತಾ ಅವರು, ಯಶ್ ವಿರುದ್ಧ ನಿಖಿಲ್ ಹೀಗೆ ಹೇಳಿಕೆ ನೀಡಬೇಕಿರಲಿಲ್ಲ. ನಿಖಿಲ್ಗೆ ಇನ್ನು ಚಿಕ್ಕ ವಯಸ್ಸು. ಸಿನೆಮಾದಲ್ಲಿ ಸಾಧನೆ ಮಾಡಿರುವ ಸ್ಟಾರ್ ಬಗ್ಗೆ ಗೌರವ ಇಲ್ಲದೆ ಮಾತನಾಡಿದ್ದಾರೆ. ಅವರ ಸಾಧನೆಯನ್ನು ಗೌರವಿಸಬೇಕು ವೈಯಕ್ತಿಕ ಟೀಕೆ ಸರಿಯಲ್ಲ ಎಂದು ನಿಖಿಲ್ಗೆ ಬುದ್ಧಿಮಾತು ಹೇಳಿದರು.
ನನ್ನ ವಿರುದ್ದವೂ ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ತೇಜೋವಧೆಗೆ ಸಿದ್ಧತೆ ನಡೆದಿದೆ. ಜೆಡಿಎಸ್ನ ಪ್ರಮುಖರೇ ನನಗೆ ಈ ಮಾಹಿತಿ ನೀಡಿದ್ದಾರೆ. ಯಾವುದೇ ವೀಡಿಯೋ, ಫೋಟೋ ಬೇಕಿದ್ದರೂ ತಿರುಚುವ ಸಾಧ್ಯತೆ ಇದೆ. ನನ್ನ ಬಗ್ಗೆ ಬೇರೆಯವರಿಂದ ಹೇಳಿಕೆ ಕೊಡಿಸುವವರೆಗೆ ಹೊಗಲು ಸಿದ್ಧತೆ ನಡೆದಿದೆ. ಅಂಬರೀಶ್ ಜೊತೆ ಕೆಲಸ ಮಾಡುತ್ತಿದ್ದ ಇಬ್ಬರು ಕೆಲಸಗಾರರನ್ನು ಸಂಪರ್ಕಿಸಿದ್ದಾರೆ. ನಿಮ್ಮನ್ನು ದುಬೈ ಅಥವಾ ಸಿಂಗಾಪುರಕ್ಕೆ ಕಳುಹಿಸುತ್ತೇವೆ. ಎಲ್ಲ ಖರ್ಚು ನಮ್ಮದೇ, 10 ರಿಂದ 15 ಲಕ್ಷ ರೂ ಹಣ ನೀಡುತ್ತೇವೆ. ಬೆಂಗಳೂರಿನಲ್ಲಿ ಒಂದು ಸೈಟ್ ಕೊಡಿಸುತ್ತೇವೆ. ಸುಮಲತಾ ಬಗ್ಗೆ ನೆಗೆಟಿವ್ ಆಗಿ ಮಾತನಾಡಬೇಕು. ಅವರ ಮನೆಯಲ್ಲಿ ಏನೆಲ್ಲ ನಡೆಯುತ್ತಿತ್ತು ಅಂತಾ ಕೆಟ್ಟದಾಗಿ ಹೇಳಿಕೆ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ನಮ್ಮ ಜೊತೆ ಕೆಲಸ ಮಾಡುತ್ತಿದ್ದ. ಮನೆಯವರೇ ಈ ಮಾಹಿತಿ ತಿಳಿಸಿದ್ದಾರೆ. ಆದರೆ ಇದಕ್ಕೆ ಅವರು ಒಪ್ಪಿಲ್ಲ. ಆದರೂ ಅವರ ಮೇಲೆ ತುಂಬಾ ಒತ್ತಡ ಹಾಕುತ್ತಿದ್ದಾರೆ. ಮುಂದಿನ ವಾರ ನಿಮಗೆ ತಿಳಿಯಲಿದೆ ಎಂದು ಸುಮಲತಾ ಹೇಳಿದರು.