ಬೆಂಗಳೂರು, ಅ. 11 : ವಿಧಾನಸಭಾ ಕಲಾಪದ ಮೊದಲ ದಿನವೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯೋ.. ರೇವಣ್ಣ ನಂಗೊಂದು ನಿಂಬೆಹಣ್ಣು ಕೊಡಪ್ಪಾ ಒಳ್ಳೇದಾಗ್ಲಿ ಎಂದು ಕಿಚಾಯಿಸಿದರು. ಮಾಜಿ ಸಚಿವ ರೇವಣ್ಣ ಇದಕ್ಕೆ ಪ್ರತಿಕ್ರಿಯೆ ನೀಡಿ ನಮ್ಮ ನಿಂಬೆಹಣ್ಣನ್ನು ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರಿಗೆ ಕೊಟ್ಟಿದ್ದೇವೆ. ಅವರು ರಫೇಲ್ ಯುದ್ಧ ವಿಮಾನದ ಮೇಲೆ ಇಟ್ಟರು ಎಂದು ನಕ್ಕರು. ಎಚ್.ಡಿ.ರೇವಣ್ಣ ಅವರ ನಿಂಬೆಹಣ್ಣು ವಿಚಾರ ಪ್ರಸ್ತಾಪವಾಗಿ ಸದನವನ್ನು ಕೆಲ ಹೊತ್ತು ನಗೆಗಡಲಲ್ಲಿ ತೇಲಿಸಿತು.
ಸಿದ್ದರಾಮಯ್ಯ ಅವರ ಪ್ರಶ್ನೆಗೆ ಸದನದ ಸದಸ್ಯರೊಬ್ಬರು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಕೇಳಿ ಎಂದು ಉತ್ತರ ತೂರಿ ಬಿಟ್ಟರು. ಆಗ ಸಿದ್ದರಾಮಯ್ಯ, ರೇವಣ್ಣ ನಿಂಬೆಹಣ್ಣು ಬಿಟ್ಟಿದ್ದರೆ ಕಷ್ಟ ಎಂದು ಕಾಲೆಳೆದರು. ನಿಂಬೆಹಣ್ಣು ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ರೇವಣ್ಣ ಮಾತನಾಡಲು ಮುಂದಾದರು. ಈ ವೇಳೆ ಸಿದ್ದರಾಮಯ್ಯ ಅವರು, ನಿಂಬೆಹಣ್ಣು ತಂದಿಯಾ ಎಂದು ಕೇಳಿ ಸದನದಲ್ಲಿ ನಗೆ ಹರಿಸಿದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಮಗೆ ರೇವಣ್ಣ ಅವರೇ ನಿಂಬೆಹಣ್ಣು ಕೊಟ್ಟಿದ್ದರು ಎನ್ನುವ ಸುದ್ದಿ ನನಗೆ ಬಂದಿತ್ತು ಎಂದು ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡುತ್ತಿದ್ದಂತೆ ಮತ್ತೆ ಮಾತು ಮುಂದುವರಿಸಿದ ಸ್ಪೀಕರ್, ನನಗೆ ನಿಮ್ಮ ಮನೆ ಬಿಟ್ಟುಕೊಟ್ಟರೆ ಸಾಕು. ನೀವು ಅದನ್ನು ಬಿಡುತ್ತಿಲ್ಲ ಎಂದು ನಗೆ ಬೀರಿದರು. ಆಗ ರೇವಣ್ಣ ಅವರು, ನಾನು ಎರಡು ತಿಂಗಳಲ್ಲೆ ಮನೆ ಬಿಟ್ಟುಕೊಟ್ಟೆ ಎಂದರು.