ಹೊಸಕೋಟೆ, ನ. 28: ಹೊಸಕೋಟೆ ಚುನಾವಣಾ ಕಣ ದಿನಕಳೆದಂತೆ ರಣರಂಗವಾಗಿ ಮಾರ್ಪಾಡು ಆಗುತ್ತಿದೆ. ನಿನ್ನೆ ರಾತ್ರಿ ಎಂಟಿಬಿ ನಾಗರಾಜ್ ಬೆಂಬಲಿಗರು ಪ್ರಚಾರ ನಡೆಸುವ ವೇಳೆ ಶರತ್ ಪರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬಾ ಆರೋಪಕ್ಕೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಹೊಸಕೋಟೆ ತಾಲೂಕಿನ ಕಲ್ಕುಂಟೆ ಅಗ್ರಹಾರದಲ್ಲಿ ಪ್ರಚಾರದ ವೇಳೆ ಮಾತನಾಡಿದ ಶರತ್, ಹಲ್ಲೆ ನಡೆದಿರುವ ಬಗ್ಗೆ ಅಧಿಕೃತವಾದ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ನೋಡಿ ಖಾಜಿಹೊಸಹಳ್ಳಿ ಗ್ರಾಮದಲ್ಲಿ ಗಲಾಟೆ ನಡೆದಿದೆ ಎಂದು ತಿಳಿದುಕೊಂಡಿದ್ದೇನೆ.
ಗ್ರಾಮಗಳಲ್ಲಿ ಸಾಮಾನ್ಯವಾಗಿ ಒಂದಲ್ಲಾ ಒಂದು ಘಟನೆಗಳು ನಡೆಯುತ್ತವೆ ಇದಕ್ಕೆ ರಾಜಕೀಯ ಬಣ್ಣ ಬಳಿಯುವಂತ ಯತ್ನ ನಡೆಯುತ್ತಿದೆ. ಯಾರು ಹಲ್ಲೆ ನಡೆಸಿ ತಪ್ಪಿತಸ್ಥರಾಗಿದ್ದಾರೆ ಅವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು ನನ್ನ ಮೇಲೆ ಮೊದಲಿನಿಂದಲೂ ಅಪಪ್ರಚಾರದ ಸುರಿಮಳೆಯೇ ನಡೆಯುತ್ತಿದ್ದು, ಎಂಟಿಬಿ ನಾಗರಾಜ್ ಅವರು ಅವರ ಪರ ಪ್ರಚಾರ ಮಾಡಿಕೊಳ್ಳುವುದಕ್ಕಿಂತ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಅಂತಾ ತಿಳಿಸಿದ್ರು.
ಇನ್ನೂ ಇಷ್ಟು ದಿನ ಶರತ್ ಬಚ್ಚೇಗೌಡ ಡೀಲ್ ಆಗಿದ್ದಾರೆ, ಪಕ್ಷಕ್ಕೆ ಮೋಸ ಮಾಡಿ ಚೂರಿ ಹಾಕಿದ್ದಾರೆ ಅಂತ ಅಪಪ್ರಚಾರ ಮಾಡುತ್ತಿದ್ದು, ಇದೀಗ ಹೊಸದಾಗಿ ಶರತ್ ಬಚ್ಚೇಗೌಡ ಗೂಂಡಾಗಿರಿ ಮಾಡಿಕೊಂಡು ಹಲ್ಲೆ, ಧಮ್ಕಿ, ಗಲಾಟೆ ಮಾಡುತ್ತಿದ್ದಾರೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಬಚ್ಚೇಗೌಡ ಹಾಗು ಶರತ್ ಬಚ್ಚೇಗೌಡ ಗೂಂಡಾ ಪ್ರವೃತ್ತಿಯನ್ನು ನಡೆಸುತ್ತಿದ್ದಾರೆಂದು ಎಂಟಿಬಿ ಭಾಷಣ ಮಾಡಿದ ಬೆನ್ನಲ್ಲೇ ರಾತ್ರಿ ಈ ರೀತಿ ಘಟನೆ ನಡೆದಿರುವುದು ವಿಚಿತ್ರ ಹಾಗು ಅನುಮಾನಗಳು ಮೂಡುತ್ತಿದೆ ಎಂದು ಹೇಳಿದರು.
ನಾವು ಪ್ರಚಾರಕ್ಕೆ ಹೋದ ಸಂಧರ್ಭದಲ್ಲಿ ಜನರು ನಮ್ಮನ್ನು ಬೆಂಬಲಿಸುತ್ತಿರುವುದನ್ನು ನೋಡಿ ಸಹಿಸಿಕೊಳ್ಳಲು ಆಗದೆ ಎಂಟಿಬಿ ನಾಗರಾಜ್ ವಿವಾದಿತ ಹೇಳಿಕೆ ನೀಡುತ್ತಿದ್ದಾರೆ. ಗ್ರಾಮದಲ್ಲಿ ಆಗುವ ಎಲ್ಲಾ ಘಟನೆಗಳಿಗೂ ರಾಜಕೀಯ ಬಣ್ಣ ಕೊಟ್ಟು ನನ್ನ ಹೆಸರನ್ನು ತಂದು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದರು. ಬಳಿಕ ಆರ್.ಅಶೋಕ್ ಕುಕ್ಕರ್ ಬ್ಲಾಸ್ಟ್ ಆಗುತ್ತಿದೆ ಎನ್ನುವ ಹೇಳಿಕೆಗೆ ಶರತ್ ಬಚ್ಚೇಗೌಡ ತಿರುಗೇಟು ನೀಡಿದ್ದು, ಕುಕ್ಕರ್ ಪ್ರತಿ ಮನೆಯಲ್ಲೂ ಉಪಯೋಗಿಸುತ್ತಾರೆ. ಆದರೆ, ಎಲ್ಲೂ ಸಹ ಬ್ಲಾಸ್ಟ್ ಆಗಿಲ್ಲ ನಾವು ಕುಕ್ಕರ್ ಅನ್ನು ಅಕ್ಷಯ ಪಾತ್ರೆ ಎಂದೇ ತಿಳಿದು ಕೊಂಡಿದ್ದೇವೆ. ಆರ್,ಅಶೋಕ್ ಅವರು ಕುಕ್ಕರ್ ಬ್ಲಾಸ್ಟ್ ಆಗುತ್ತದೆ ಅಂದುಕೊಂಡರೆ ನಮಗೆ ಕುಕ್ಕರ್ ಅಕ್ಷಯ ಪಾತ್ರೆ ಇದ್ದಂತೆ ಎಂದು ಹೊಸಕೋಟೆ ಕ್ಷೇತ್ರದ ಪ್ರಚಾರದ ವೇಳೆ ಹೇಳಿಕೆ ನೀಡಿದರು.