ಬೆಂಗಳೂರು: ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಎ ಅಮೃತ್ರಾಜ್ರವರು, ಹಲವಾರು ವರ್ಷಗಳಿಂದ ಪಾಲಿಕೆಯ ಕರ್ತವ್ಯಕ್ಕೆ ಹಾಜರಾಗದೇ, ಪಾಲಿಕೆ ನಿಯಮಗಳನುಸಾರವಾಗಿ ವರ್ಗಾವಣೆಗೊಳ್ಳದೆ, ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ತವ್ಯಕ್ಕೆ ಹಾಜರಾಗದೇ ಸಂಬಳವನ್ನು ಸಹ ಪಡೆಯುತ್ತಿದ್ದಾರೆ.
ಎ. ಅಮೃತರಾಜ್ ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆ ಟ್ರಸ್ಟ್ (ರಿ) ಹೆಸರಿಗೆ ಪ್ರತಿ ತಿಂಗಳು ಹಣ ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ. ಟ್ರಸ್ಟ್ ಹೆಸರಿನಲ್ಲಿ ತಿಂಗಳಿಗೊಮ್ಮೆ ಕಾರ್ಯಕ್ರಮ ಮಾಡಿ ಹಣ ವಸೂಲಿ ಮಾಡುವಂತೆ ನೌಕರರಿಗೆ ಒತ್ತಡ ಹೇರಿ, ಹಫ್ತಾ ವಸೂಲಿ ದಂಧೆ ಮಾಡುತ್ತಿದ್ದಾರೆಂದು ನೌಕರರು ನಮ್ಮ ಸಂಘಕ್ಕೆ ದೂರುಗಳನ್ನು ಸಲ್ಲಿಸಿದ್ದಾರೆ.
ಬಿಬಿಎಂಪಿ ನೌಕರರಾಗಿ ಅನುಕಂಪದ ಆಧಾರದ ಮೇಲೆ ಉದ್ಯೋಗವನ್ನು ಪಡೆದಿರುವ ಎ. ಅಮೃತ್ರಾಜ್ ರವರ ನೇಮಕಾತಿ ಹಾಗೂ ಶಿಕ್ಷಣ ಪ್ರಮಾಣ ಪತ್ರಗಳನ್ನು ಪರಿಶೀಲನೆ ಮಾಡಬೇಕಾಗಿ, ದಾಖಲಾತಿಗಳಲ್ಲಿ ತಂದೆಯ ಹೆಸರು ಬೇರೆ ಇದ್ದರೂ, ಅನುಕಂಪದ ಆಧಾರದ ಉದ್ಯೋಗವನ್ನು ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಠಿಸಿರುವ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ಕೂಡ ದಾಖಲಾಗಿರುತ್ತದೆ.
ಅಮೃತ್ರಾಜ್ ರವರು ಸಂಘದ ಹೆಸರಿನಲ್ಲಿ ಪ್ರತಿಯೊಬ್ಬ ನೌಕರ ಹಾಗೂ ಅಧಿಕಾರಿಗಳನ್ನು ಬೆದರಿಸಿ, ಕಾನೂನುಬಾಹಿರವಾಗಿ ಟ್ರಸ್ಟ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಹಣ ವಸೂಲಿ ಮಾಡುತ್ತಿರುವಂತಹ ಇಂತಹ ವ್ಯಕ್ತಿ ಕರ್ತವ್ಯಕ್ಕೂ ಹಾಜರಾಗದೇ, ಸಂಬಳ ಪಡೆಯುತ್ತಿದ್ದು, ವರ್ಗಾವಣೆ ಇಲ್ಲದೆ, ಒಂದೇ ಸ್ಥಳದಲ್ಲಿರುವ ಬಗ್ಗೆ ಹಾಗೂ ಇನ್ನಿತರೇ ವಿಷಯಗಳ ಬಗ್ಗೆ ಕೂಡಲೇ ಖುದ್ದು ಪರಿಶೀಲನೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕು.
ಕೂಡಲೇ ಅವರನ್ನು ಪಾಲಿಕೆ ಹುದ್ದೆಯಿಂದ ವಜಾ ಮಾಡಿ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ನಮೂದಿಸಲು ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ಸೂಚಿಸಬೇಕಾಗಿ ಬಿಬಿಎಂಪಿ ಆಯುಕ್ತರಾಗಿರುವ ತುಷಾರ್ ಗಿರಿನಾಥ್ ಅವರಿಗೆ ಈ ಮೂಲಕ ಕೋರಲಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕೇಂದ್ರ ಕಚೇರಿ ಬಿಬಿಎಂಪಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಂದು ಹೇಳಿದರು.