ಆನೇಕಲ್: ಮಳೆ ನಿಂತರು ಮರದ ಹನಿ ನಿಲ್ಲುವುದಿಲ್ಲ ಎಂಬಂತೆ ನಿವಾರ್ ಚಂಡಮಾರುತ ಆರ್ಭಟಿಸಿ ದುರ್ಬಲವಾದರು ಅದು ಸೃಷ್ಟಿಸಿದ ಅವಾಂತರ ಮಾತ್ರ ನಿಲ್ಲುತ್ತಿಲ್ಲ. ಪಶ್ಚಿಮ ಬಂಗಾಳದ ಸಾಗರದಲ್ಲಿ ಉಂಟಾದ ನಿವಾರ್ ಚಂಡಮಾರುತ ಕರ್ನಾಟಕ ರೈತರ ಪಾಲಿಗೂ ಸಂಕಷ್ಟ ತಂದೊಡ್ಡಿದೆ.
ಹವಾಮಾನ ವೈಪರೀತ್ಯದಿಂದ ಕಳೆದೆರಡು ದಿನಗಳ ಹಿಂದೆ ಬೆಂಗಳೂರು ಸೇರಿದಂತೆ ಸುತ್ತಮುತ್ತ ದಿನವೀಡಿ ಭಾರೀ ಮಳೆಯಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ರಾಗಿ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕು ರಾಗಿ ಕಣಜ ಎಂದೇ ಖ್ಯಾತಿ ಗಳಿಸಿದೆ. ಇಲ್ಲಿನ ಬಹುತೇಕ ಮಳೆಯಾಧಾರಿತ ಕೃಷಿ ಮಾಡುತ್ತಿದ್ದು, ರಾಗಿಯನ್ನು ಪ್ರಧಾನ ಬೆಳೆಯನ್ನಾಗಿ ಬೆಳೆಯುತ್ತಾರೆ. ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಉತ್ತಮವಾಗಿ ರಾಗಿ ಫಸಲು ಸಹ ಬಂದಿತ್ತು. ಇದೀಗ ದಿಢೀರ್ ಮಳೆ ಸುರಿದಿದ್ದರಿಂದ ಕೈಗೆ ಬಂದ ಬೆಳೆ ಮಣ್ಣು ಪಾಲಾಗಿದೆ. ವರ್ಷ ಪೂರ್ತಿ ದುಡಿದು ಬೆವರು ಸುರಿಸಿ ಬೆಳೆದ ಬೆಳೆ ಕೇವಲ ಎರಡೇ ದಿನಕ್ಕೆ ಅಕಾಲಿಕವಾಗಿ ಸುರಿದ ಮಳೆಗೆ ಆಹುತಿಯಾಗಿದೆ.
ಸಾಮಾನ್ಯವಾಗಿ ಸುಗ್ಗಿ ಕಾಲದಲ್ಲಿ ರಾಗಿ ಕಟಾವು ಮಾಡಿ ಕಣದಲ್ಲಿ ಒಕ್ಕಣೆ ಮಾಡಿ ಮನೆಗೆ ದವಸ ಒಯ್ಯಕಾಗುತ್ತದೆ. ಆದರೆ ಎರಡು ದಿನದಿಂದ ಸುರಿದ ಮಳೆಗೆ ಬೆಳೆ ನಾಶವಾಗಿದ್ದು, ರೈತರ ನಷ್ಟವಾಗಿದೆ ಎಂದು ರೈತ ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ಕಟಾವಿಗೆ ಬಂದಿದ್ದ ಸಾವಿರಾರು ಎಕರೆ ಪ್ರದೇಶದಲ್ಲಿ ರಾಗಿ ಬೆಳೆ ಮಳೆಗೆ ಆಹುತಿಯಾಗಿದೆ. ಈಗಾಗಲೇ ರಾಗಿ ಕಟಾವಿಗೆ ಹಣ ನೀಡಲಾಗಿದೆ. ಈಗ ಪುನಃ ಒಣಗಿಸಲು ಕೂಲಿ ಕೆಲಸದವರಿಗೆ ಹಣ ನೀಡಬೇಕು.
ಒಂದು ವೇಳೆ ಮತ್ತೆ ಮಳೆ ಸುರಿದರೆ ಬೆಳೆ ಸಂಪೂರ್ಣ ನಾಶವಾಗುತ್ತದೆ. ಒಮ್ಮೆ ಮಳೆಗೆ ರಾಗಿ ಬೆಳೆ ಸಿಲುಕಿದ ಮೇಲೆ ಎಷ್ಟೆ ಒಣ ಹಾಕಿದರು ರಾಗಿ ಮುಗ್ಗುಲು ಬರುತ್ತದೆ. ಇದರಿಂದ ಮುದ್ದೆ ರುಚಿಕರವಾಗಿ ಇರುವುದಿಲ್ಲ. ಜೊತೆಗೆ ಜಾನುವಾರುಗಳ ಸಹ ರಾಗಿ ಮೇವನ್ನು ಸರಿಯಾಗಿ ತಿನ್ನುವುದಿಲ್ಲ. ಅಕಾಲಿಕ ಮಳೆಯಿಂದಾಗಿ ತಾಲೂಕಿ ಬಹುತೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ನಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ ಸರ್ಕಾರ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ರೈತ ನಾಗರಾಜ್ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ದೇವರು ವರ ಕೊಟ್ಟರು ಪೂಜಾರಿ ವರ ಕೊಡುವುದಿಲ್ಲ ಎನ್ನುವ ಹಾಗೆ ಕೈಗೆ ಬಂದ ಬೆಳೆ ಇನ್ನೇನು ಬಾಯಿಗೆ ಬರುತ್ತದೆ ಎನ್ನುವಷ್ಟರಲ್ಲಿ ಮಳೆ ಕಸಿದು ಮಣ್ಣು ಪಾಲು ಮಾಡಿದ್ದು, ಕಂಗಾಲಾಗಿರುವ ರೈತ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾನೆ.