ಕೊಡಗು, ಏ. 20, ನ್ಯೂಸ್ ಎಕ್ಸ್ ಪ್ರೆಸ್: ಜಗತ್ತಲ್ಲಿ ಎಂತೆಂಥಾ ವಿಚಿತ್ರ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ಇದೊಂದು ಘಟನೆ ಸಾಕ್ಷಿ. ಹೆತ್ತ ತಾಯಿಯ ಕಣ್ಣೆದುರೇ ಮಗ ವಿಷ ಸೇವಿಸಿ ಸಾವನ್ನಪ್ಪಿದ್ರೂ, ತಾಯಿಯ ಗಮನಕ್ಕೆ ಬಾರದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಗ್ರಾಮದಲ್ಲಿ ನಡೆದಿದೆ. ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ರಿಂದ ಮಗ ವಿಷ ಕುಡಿದಿದ್ದು, ಗಮನಕ್ಕೆ ಬಂದಿರಲಿಲ್ಲ. ಐದು ದಿನಗಳ ಬಳಿಕ ಊರಿಗೆ ಹೋಗಿದ್ದ ನೆರೆಮನೆಯವರು ಬಂದು ನೋಡಿದಾಗ ವಿಷಯ ತಿಳಿದು ಶವ ಹೊರ ತೆಗೆದಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಗೌತಮ್ ಖಾಸಗಿ ಬಸ್ ಚಾಲಕನಾಗಿದ್ದು, ಅವಿವಾಹಿತನಾಗಿದ್ದ ಈತನಿಗೆ ಒಬ್ಬ ಸಹೋದರಿಯಿದ್ದು, ಆಕೆಯನ್ನು ಮದುವೆ ಮಾಡಿ ಕೊಟ್ಟು, ತಾಯಿ ಜೊತೆಗೆ ವಾಸವಾಗಿದ್ದ. ವಿಷು ಹಬ್ಬಕ್ಕೆಂದು ಊರಿಗೆ ಹೋಗಿದ್ದ ಪಕ್ಕದ ಮನೆಯವರು ನಿನ್ನೆ ಬಂದಿದ್ದಾರೆ. ಗೌತಮ್ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಮನೆಯೊಳಗೆ ಹೋದಾಗ ಗೌತಮ್ ಮೃತದೇಹ ಕಂಡುಬಂದಿದೆ. ಐದು ದಿನಗಳ ಹಿಂದೆಯೇ ಗೌತಮ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಶಂಕಿಸಲಾಗಿದೆ. ಆದ್ರೆ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.