ತುಮಕೂರು: ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಇಂದು ಬೆಳಗಿನ ಜಾವ ಸಿದ್ದಗಂಗಾ ಮಠಕ್ಕೆ ಸ್ಥಳಾಂತರಿಸಲಾಗಿದೆ. ಸಿದ್ದಗಂಗಾ ಶ್ರೀಗಳ ಆರೋಗ್ಯ ಯಥಾಸ್ಥಿತಿಯಲ್ಲಿದ್ದು, ಮಠಕ್ಕೆ ಕರೆದೊಯ್ಯುವಂತೆ ಸ್ವಾಮೀಜಿಗಳು ಹಠ ಹಿಡಿದಿದ್ದರು. ಹೀಗಾಗಿ ಅವರನ್ನು ಮಠಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕಿರಿಯ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ಮಠದಲ್ಲೇ ಶ್ರೀಗಳಿಗೆ ಚಿಕಿತ್ಸೆ ಮುಂದುವರೆಯಲಿದೆ. ಶ್ವಾಸಕೋಶದ ಸೋಂಕು ಹೊರತು ಪಡಿಸಿದರೆ ಬೇರಾವುದೇ ಆರೋಗ್ಯ ತೊಂದರೆಯಿಲ್ಲ. ಶ್ವಾಸಕೋಶದ ಸೋಂಕಿನಿಂದ ತುಂಬಿಕೊಳ್ಳುತ್ತಿರುವ ನೀರನ್ನು ತೆಗೆಯಲಾಗಿದೆ . ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಭಕ್ತರು ಆತಂಕಪಡುವ ಅಗತ್ಯವಿಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ವರ್ ತಿಳಿಸಿದ್ದಾರೆ. ಇಂದು ಹಾಸನ, ಚಿತ್ರದುರ್ಗ, ರಾಮನಗರ, ಬೆಂಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಸೇರಿದಂತೆ ಇಡೀ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತುಮಕೂರಿಗೆ ನಿಯೋಜಿಸಿದ್ದಾರೆ.
ಸಿದ್ದಗಂಗಾ ಮಠದ ಹಿಂಭಾಗದಲ್ಲಿ ಮಾರನಾಯ್ಕ ಪಾಳ್ಯ ಬಳಿ ಬೃಹತ್ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದಾರೆ. ತುಮಕೂರು ನಗರದಲ್ಲಿ ಇರುವ ಎಲ್ಲಾ ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು ಸೇರಿದಂತೆ ಶಾಲಾ ಕಾಲೇಜುಗಳಲ್ಲಿ ಅಲರ್ಟ್ ಮಾಡಲಾಗಿದೆ.