ಬೆಂಗಳೂರು, ಆ. 29: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ 1000 ಕ್ಕೂ ಹೆಚ್ಚು ಗ್ರಾಮಗಳು, 2 ಲಕ್ಷ ಮನೆಗಳು ಸಂಪೂರ್ಣವಾಗಿ ನಶಿಸಿಹೋಗಿರುವ ಗಂಭೀರವಾದ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸದ ಕೇಂದ್ರ ಸರ್ಕಾರದ ಕ್ರಮವನ್ನು ಬಲವಾಗಿ ಖಂಡಿಸಿದ ಹಿರಿಯ ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ ಬಡವರ ದುಸ್ತರವಾಗಿರುವ ಬದುಕನ್ನು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನದಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು. ಗಂಭೀರವಾದ ಪ್ರವಾಹ ಪರಿಸ್ಥಿತಿ ಎದುರಾದಾಗ ಸಚಿವರಾರಾಗಬೇಕು, ಸಚಿವರಾದವರಲ್ಲಿ ಉಪ ಮುಖ್ಯಮಂತ್ರಿ ಯಾರಾಗಬೇಕು ಎಂಬ ರಾಜಕೀಯ ಅಧಿಕಾರದ ಕಚ್ಚಾಟದಲ್ಲಿ ನಿರತರಾಗಿದ್ದ ಬಿಜೆಪಿ ಪಕ್ಷದ ಮಂತ್ರಿಗಳಾರೂ ಸಂತ್ರಸ್ಥರ ಬಳಿ ಹೋಗಲಿಲ್ಲ ಎಂದು ಟೀಕಿಸಿದರು.
ಇಂದು ಮೌರ್ಯ ವೃತ್ತದ ಗಾಂಧಿ ಪ್ರತಿಮೆಯ ಬಳಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ತಕ್ಷಣ ಸರ್ವಪಕ್ಷಗಳ ಸಭೆ ಕರೆಯಬೇಕು, ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಮಂತ್ರಿಗಳ ಬಳಿಗೆ ಕೊಂಡೊಯ್ಯಬೇಕು.
ವಿಧಾನ ಮಂಡಳದ ವಿಶೇಷ ಅಧೀವೇಶನ ಕರೆದು ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು. ಸರ್ಕಾರಕ್ಕಿಂತ ಹೆಚ್ಚು ಪ್ರವಾಹಪೀಡಿತರ ನೆರವಿಗೆ ದಾವಿಸಿದ ನಾಗರೀಕರ ಔದಾರ್ಯವನ್ನು ಕೃತಜ್ಞತೆಯಿಂದ ಸ್ಮರಿಸಿದ ಅವರು ಪ್ರಧಾನ ಮಂತ್ರಿಗಳಂತೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡಲೇ ಇಲ್ಲ. ಕೇಂದ್ರದ ಇಬ್ಬರು ಸಚಿವರು ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಯಾವುದೇ ಭರವಸೆ ಕೊಡಲಿಲ್ಲ, ಬಿಡಿಗಾಸು ಬಿಡುಗಡೆ ಮಾಡಲಿಲ್ಲ.
ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು ಪ್ರವಾಹ ಪೀಡಿತರ ನೆರವಿಗೆ ಬರಲಿಲ್ಲ, ಅವರ ಗೋಳನ್ನು ಕೇಳಲಿಲ್ಲ, ಇದಕ್ಕಿಂತ ನಮ್ಮ ರಾಜ್ಯದ ನಿರ್ಲಕ್ಷ್ಯಕ್ಕೆ ಬೇರಾವ ಉದಾಹರಣೆ ಬೇಕೆಂದು ಪ್ರಶ್ನಿಸಿದರು. ತಾತ್ಕಾಲಿಕ ಶೆಡ್ಗಳ ನಿರ್ಮಾಣವಾಗಿಲ್ಲ, ಪಠ್ಯಪುಸ್ತಕ ಕಳೆದುಕೊಂಡ ಮಕ್ಕಳಿಗೆ ಪಠ್ಯಪುಸ್ತಕ ದೊರಕಿಸುವ ಸಣ್ಣ ಭರವಸೆಯೂ ದೊರಕಿಲ್ಲ, ಶೈಕ್ಷಣಿಕ ವರ್ಷ ಬದಲಾವಣೆ ಮಾಡುವ ಸಣ್ಣ ನಿರ್ಣಯ ಆಗಲಿಲ್ಲ. ಸರ್ಕಾರ ಏನು ಮಾಡುತ್ತಿದೆ ಎಂದು ಆಕ್ಷೇಪವೆತ್ತಿದರು.