ಇನ್ಮುಂದೆ ಆನ್‍ಲೈನ್‍ನಲ್ಲಿ ಮಾವಿನಹಣ್ಣು..!  

ಇನ್ಮುಂದೆ ಆನ್‍ಲೈನ್‍ನಲ್ಲಿ ಮಾವಿನಹಣ್ಣು..!  

ಬೆಂಗಳೂರು, ಮೇ. 11, ನ್ಯೂಸ್‍ ಎಕ್ಸ್ ಪ್ರೆಸ್‍: ಬೆಂಗಳೂರಿನಲ್ಲಿ  ಹಣ್ಣಿನ ರಾಜ ಮಾವಿಗೆ ಎಲ್ಲಿಲ್ಲದ ಡಿಮ್ಯಾಂಡ್‍. ಬೇಸಿಗೆಯ ಮೂರ್ನಾಲ್ಕು ತಿಂಗಳು ಮಾತ್ರ ವೆರೈಟಿ ಮಾವುಗಳು ಸಿಗುತ್ತೆ. ಇಷ್ಟು ದಿನ ನೀವೆಲ್ಲಾ ರಸ್ತೆ ಅಥವಾ ಹಣ್ಣಿನ ಮಳಿಗೆಗಳಲ್ಲಿ ಮಾವಿನಹಣ್ಣಿಗೆ ಚೌಕಾಸಿ ಮಾಡ್ಕೊಂಡು ಖರೀದಿ ಮಾಡ್ತಿದ್ರಿ. ಆದ್ರೆ ಇನ್ಮುಂದೆ  ಇಂತಹ ತಲೆನೋವಿಲ್ಲ. ನಿಮಗೆ ಬೇಕಾದ ಮಾವಿನ ಹಣ್ಣುಗಳನ್ನು ಕೂತಲ್ಲೇ ಆರ್ಡರ್ ಮಾಡ್ಬಹುದು. ಹೌದು, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಆನ್‍ಲೈನ್‍ ಅಪ್ಲಿಕೇಶನ್‍ವೊಂದನ್ನು ಅಭಿವೃದ‍್ಧಿಪಡಿಸಿದೆ. ರೈತರಿಂದ ನೇರವಾಗಿ ಗ್ರಾಹಕರು ಮಾವಿನಹಣ್ಣನ್ನು ಬುಕ್‍ ಮಾಡ್ಬುಹುದು. ರೈತರಿಂದಲೇ ಹಣ್ಣು ನಿಮ್ಮ ಮನೆಗೆ ಬರೋದ್ರಿಂದ ಕೆಮಿಕಲ್‍ ಹಾಕ್ತಾರೆ ಅನ್ನೋ ಭಯ ಇರಲ್ಲ. ಅಷ್ಟೇ ಅಲ್ಲ ರೈತರೂ ಕೂಡಾ ಮಧ್ಯವರ್ತಿಗಳ ಕಿರಿಕ್‍ ಇಲ್ಲದೇ ಮಾರ್ಕೆಟ್‍ ರೇಟ್‍ನಲ್ಲಿ ಹಣ್ಣು ಮಾರಾಟ ಮಾಡಬಹುದು.

3 ಕೆಜಿ ಆರ್ಡರ್ ಕಡ್ಡಾಯ: ಬಾದಾಮಿ, ಆಲ್ಫೋನ್ಸೊ, ನೀಲಮ್, ದಶೆಹರಿ, ಮಲ್ಲಿಕಾ, ಸಿಂಧೂರ, ಬೆನೆಶನ್, ಬಗಂಪಲ್ಲಿ ಹೀಗೆ 12 ವಿವಿಧ ಜಾತಿಯ ಮಾವಿನ ಕಾಯಿ ಅಥವಾ ಹಣ್ಣನ್ನು ಮೊಬೈಲ್ ಆಪ್ ಮೂಲಕ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಆದರೆ ಆನ್ ಲೈನ್ ನಲ್ಲಿ ಕನಿಷ್ಠ 3 ಕೆಜಿ ಆರ್ಡರ್ ಮಾಡಿರಬೇಕು. ಒಂದು ವೇಳೆ ಪಟ್ಟಿಯಲ್ಲಿಲ್ಲದ ತಮಗೆ ಇಷ್ಟವಾದ ಬೇರೆ ಜಾತಿಯ ಮಾವನ್ನು ಕೂಡ ಆರ್ಡರ್ ಮಾಡಿ ತರಿಸಿಕೊಳ್ಳಬಹುದು.

ಗ್ರಾಹಕರಿಗೆ ಮಾವು ಪ್ರವಾಸ: ಮಾವಿನ ವೈವಿಧ್ಯತೆಯನ್ನು ಸವಿಯಬೇಕೆಂದಿರುವ ಗ್ರಾಹಕರಿಗೆ ನಿಗಮ ಇದೇ 19ರಿಂದ ಮಾವು ಪ್ರವಾಸ ಆರಂಭಿಸಲಿದ್ದು 100 ರೂಪಾಯಿ ನೀಡಿ ಆನ್ ಲೈನ್ ನಲ್ಲಿ ದಾಖಲಾತಿ ಮಾಡಿಕೊಂಡರೆ  ಗ್ರಾಹಕರನ್ನು ರಾಮನಗರ ಮತ್ತು ತುಮಕೂರುಗಳಲ್ಲಿ ಮಾವು ಬೆಳೆಯುವ ರೈತರ ತೋಟಗಳಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ತಮಗೆ ಬೇಕಾದ ಮಾವುಗಳನ್ನು ಖರೀದಿಸಬಹುದು. ಸಾರ್ವಜನಿಕರಿಗೆ ಸದ್ಯದಲ್ಲಿಯೇ ಮೊಬೈಲ್ ಆಧಾರಿತ ಮಾವು ಖರೀದಿ ಲಭ್ಯವಾಗಲಿದೆ.

ಲಾಲ್‍ಬಾಗ್‍ನಲ್ಲಿ ಮಾವುಮೇಳ: ಕರ್ನಾಟಕ ಮಾವು ನಿಗಮ ವಾರ್ಷಿಕ ಮಾವು ಮೇಳವನ್ನು ಮೇ 30ರಿಂದ ಜೂನ್ 24ರವರೆಗೆ ಲಾಲ್ ಬಾಗ್ ನಲ್ಲಿ ಹಮ್ಮಿಕೊಳ್ಳುತ್ತಿದ್ದು 80ಕ್ಕೂ ಅಧಿಕ ಮಳಿಗೆಗಳು ತೆರೆಯುತ್ತವೆ. ರಾಜ್ಯದ ಹಲವು ಜಿಲ್ಲೆಗಳಿಂದ ಮಾವು ಬೆಳೆಗಾರರು ಈ ಮೇಳದಲ್ಲಿ ಭಾಗವಹಿಸುತ್ತಾರೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos