ಬೆಂಗಳೂರು, ಆ. 18 : ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಮಂಗಳವಾರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾಗಿದೆಯಾದರೂ ಯಾರಿಗೆಲ್ಲ ಸಚಿವ ಪಟ್ಟ ಸಿಗಲಿದೆ ಎನ್ನುವುದು ಇನ್ನೂ ಗುಟ್ಟಾಗಿಯೇ ಉಳಿದಿದೆ. ಎಲ್ಲವೂ ಹೈಕಮಾಂಡ್ ಆಣತಿಯಂತೆ ಗುಟ್ಟಾಗಿ ನಡೆಯುತ್ತಿರುವುದರಿಂದ ಸಚಿವಾಕಾಂಕ್ಷಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ.
ಶನಿವಾರ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಸಿಎಂ ಯಡಿಯೂರಪ್ಪ ತಾವು ಸಿದ್ಧಪಡಿಸಿಕೊಂಡು ಬಂದ ಸಂಭಾವ್ಯ ಸಚಿವರ ಪಟ್ಟಿಯನ್ನು ನೀಡಿ ವಿವರಣೆ ನೀಡಿದರು. ಮಾತುಕತೆಯ ಬಳಿಕ ಶಾ ಅವರು, ಸಂಪುಟ ವಿಸ್ತರಣೆಗೆ ಮಂಗಳವಾರ ದಿನಾಂಕ ನಿಗದಿ ಮಾಡಿದ್ದಾರೆ.
ಆದರೆ ಸಂಪುಟ ವಿಸ್ತರಣೆಗೂ ಮುನ್ನ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಸುವಂತೆ ಯಡಿಯೂರಪ್ಪಗೆ ನಿರ್ದೇಶನ ನೀಡಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಸಂಪುಟ ವಿಸ್ತರಣೆಗೂ ಮುನ್ನ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿರುವುದು ಹೊಸ ರಾಜಕೀಯ ಸಂಪ್ರದಾಯಕ್ಕೆ ನಾಂದಿ ಹಾಡಿದೆ.
ಅಮಿತ್ ಶಾ ಭೇಟಿ ಬಳಿಕ ಮುಖ್ಯಮಂತ್ರಿ ಕಾರ್ಯಾಲಯದಿಂದ ಮಾಡಿರುವ ಟ್ವೀಟ್ನಲ್ಲಿ ‘ ಮಂಗಳವಾರ ಬೆಳಗ್ಗೆ 10ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ ‘ ಎಂದು ಪ್ರಕಟಿಸಿದ್ದಾರೆ.