ಕಾರವಾರ, ಏ. 25, ನ್ಯೂಸ್ ಎಕ್ಸ್ ಪ್ರೆಸ್: ಪ್ರವಾಸಿ ಸ್ಥಳವಾಗಿರುವ ಗೋಕರ್ಣದಲ್ಲೊಂದು ಮಾನಗೇಡಿ ಕೃತ್ಯ ಬೆಳಕಿಗೆ ಬಂದಿದೆ. ಲಾಡ್ಜ್ನಲ್ಲಿ ಉಳಿದಿದ್ದ ಮಹಿಳೆ ಕುಟುಂಬಕ್ಕೆ ಈ ಕಹಿ ಅನುಭವ ಆಗಿದ್ದು, ಅವರೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೌದು, ಗೋಕರ್ಣದ ಖಾಸಗಿ ಲಾಡ್ಜ್ವೊಂದರಲ್ಲಿ ವಾಸ್ತವ್ಯ ಹೂಡಿದ್ದಾಗ ತನ್ನ ಅಪ್ರಾಪ್ತ ವಯಸ್ಸಿನ ಮಗಳು, ಮತ್ತಾಕೆಯ ಸ್ನೇಹಿತೆ ಸ್ನಾನ ಮಾಡುತ್ತಿರುವುದನ್ನು ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದೆ. ಪಕ್ಕದ ರೂಮ್ನಿಂದ ಕೆಲವರು ಮೊಬೈನಲ್ಲಿ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ ಎಂದು ಬೆಂಗಳೂರಿನ ಮಹಿಳೆವೋರ್ವರು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗೋಕರ್ಣದ ಬಿಜ್ಜೂರಿನ ಕರಿಯಪ್ಪನ ಕಟ್ಟೆ ಬಳಿ ಇರುವ ಖಾಸಗಿ ರೆಸಾರ್ಟ್ನಲ್ಲಿ ಎ. 20 ರಂದು ನನ್ನ ಮಗಳು ಹಾಗೂ ಆಕೆಯ ಸ್ನೇಹಿತೆ ಸ್ನಾನ ಮಾಡುತ್ತಿದ್ದರು. ಆದರೆ ಪಕ್ಕದ ರೂಮ್ನ ಬಾತ್ರೂಂ ಗೋಡೆ ಮೇಲಿಂದ ಯಾರೋ ಮೊಬೈಲ್ ಮೂಲಕ ಸ್ನಾನ ಮಾಡುವ ದೃಶ್ಯ ಚಿತ್ರೀಕರಿಸಿದ್ದಾರೆ. ಅದ್ದರಿಂದ ಅಂದು ಪಕ್ಕದ ರೂಮ್ನಲ್ಲಿದ್ದ ಬೆಂಗಳೂರಿನ ನಿವಾಸಿಗಳಾದ ನಿರಂಜನ್, ಪಂಡಿತ್ ಸುಭಾಷ್, ಕೃಷ್ಣನ್ ಎಂಬುವರ ಮೇಲೆ ಸಂಶಯ ವ್ಯಕ್ತಪಡಿಸಿ ಮಹಿಳೆ ಈ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆ ಪಿಎಸ್ಐ ಸಂತೋಷಕುಮಾರ್ ಐಪಿಸಿ ಸೆಕ್ಷನ್ 354 (ಸಿ) ಮತ್ತು 12 ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.