ಮಂಡ್ಯ: ಮಂಡ್ಯ ಹಾಲು ಉತ್ಪಾದಕರ ಒಕ್ಕೂಟದಲ್ಲಿ ನಡೆದಿರುವ ಐದು ನೂರು ಕೋಟಿಗೂ ಹೆಚ್ಚಿನ ಹಗರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಆಗ್ರಹಿಸಿದೆ.
ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷರಾದ ಮಧುಚಂದನ್ ಮಂಡ್ಯ ಮನ್ ಮೂಲ್ ನಲ್ಲಿ ಐದು ನೂರು ಕೋಟಿಗೂ ಹೆಚ್ಚು ಮೌಲ್ಯದ ಹಗರಣ ನಡೆದಿದೆ ಸರಕಾರ ಕೇವಲ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಕಣ್ಣೋರೆಸುವ ಕೆಲಸ ಮಾಡಬಾರದು. ಐದು ಕೋಟಿಗೂ ಹೆಚ್ಚಿನ ಆರ್ಥಿಕ ಹಗರಣಗಳನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೆಟಿಪಿಎಲ್ ನಿಯಮಗಳು ಹೇಳುತ್ತವೆ.ಮಂಡ್ಯ ಮೂಡಾ ಹಾಗೂ ರಾಮನಗರದ ರೂಡಾ ಹಗರಣಗಳು ಐದು ಕೋಟಿ ದಾಟಿದ ಕಾರಣಕ್ಕೆ ಸಿಬಿಐ ತನಿಖೆಗೆ ವಹಿಸಲಾಗಿದೆ.ಅದೇ ಮಾದರಿಯಲ್ಲಿ ಮನ್ ಮೂಲ್ ಹಗರಣವನ್ನು ಸಿಬಿಐಗೆ ವಹಿಸಿ ಅಧಿಕಾರಿಗಳು ಹಾಗೂ ನಿರ್ದೆಶಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿದರು.
ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಈ ಅವ್ಯವಹಾರದಿಂದಾಗಿ ಜಿಲ್ಲೆಯ ಪ್ರತಿಯೊಬ್ಬ ಹಾಲು ಉತ್ಪಾದಕರಿಗೆ ಐವತ್ತು ಸಾವಿರ ನಷ್ಟವಾಗಿದೆ.ಈ ಹಣವನ್ನು ಅಕ್ರಮ ಎಸಗಿದವರಿಂದಲೆ ವಸೂಲು ಮಾಡಬೇಕು ಐದು ವರ್ಷಗಳ ಹಿಂದೆ ನಿರ್ದೇಶಕರುಗಳ ಆಸ್ತಿ ಎಷ್ಟಿತ್ತು ಈಗ ಎಷ್ಟಿದೆ ಎಂಬುದು ಮಂಡ್ಯ ಜಿಲ್ಲೆಯ ಜನರಿಗೆ ತಿಳಿದಿದೆ ಮೆಗಾಡೈರಿ ಹೆಸರಿನಲ್ಲು ಹಾಲು ದರ ಕಡಿತಗೊಳಿಸಿ ಲೂಟಿ ಮಾಡಲಾಗಿದೆ.ಮೆಗಾಡೈರಿ ಹೆಸರಿನಲ್ಲಿ ಸಂಗ್ರಹಿಸಿದ ಕೋಟ್ಯಾಂತರ ರೂಪಾಯಿಗಳನ್ನು ಹಾಲು ಉತ್ಪಾದಕರಿಗೆ ವಾಪಸ್ ಮಾಡಿಲ್ಲ. ಮನ್ ಮೂಲ್ ಮತ್ತೊಂದು ಮೈಶುಗರ್ ಆಗುವುದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಆಡಳಿತ ಮಂಡಳಿ ಹಾಗೂ ಸರಕಾರಿ ಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸಿಬಿಐ ತನಿಖೆಗೆ ಆದೇಶಿಸಲಿ.ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದರು.