ಬೆಂಗಳೂರು: ಬೆಂಗಳೂರಿನ ಬೊಮ್ಮನಹಳ್ಳಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಓಡಾಡುತ್ತಿದ್ದ ಕಿಲಾಡಿ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಪದೇ ಪದೇ ಅರಣ್ಯ ಇಲಾಖೆ ಸಿಬ್ಬಂದಿ ಕಣ್ತತಪ್ಪಿಸಿ ಓಡಾಡುತ್ತಿದ್ದ ಚಿರತೆ ಮೂರು ದಿನಗಳ ನಂತರ ಇಂದು ಸಿಕ್ಕಿ ಬಿದ್ದಿದೆ.
ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಬೊಮ್ಮನಹಳ್ಳಿಯ ಕೈಗಾರಿಕಾ ಪ್ರದೇಶದ ಕೂಡ್ಲುಗೇಟ್ನ ಕೃಷ್ಣಾರೆಡ್ಡಿಪಾಳ್ಯದ ಪಾಳುಬಿದ್ದ ಕಟ್ಟಡದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದರು. ಆದರೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿದ್ದರಿಂದ ಚಿರತೆ ಸ್ಥಳದಲ್ಲೇ ಮೃತಪಟ್ಟಿತ್ತು. ಚಿರತೆ ಸಾವು ಜನರ ಆಕ್ರೋಶ ಕಾರಣವಾಗಿದ್ದು, ಅರಣ್ಯ ಇಲಾಖೆಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಇನ್ನು ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆಯಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಹೌದು ಕಾರ್ಯಾಚರಣೆ ಸಂದರ್ಭದಲ್ಲಿ ಭಯ ಬಿದ್ದ ಚಿರತೆ ಬಲೆಯ ಕಡೆ ಓಡಿ ಬಂದಿತ್ತು. ಚಿರತೆ ಬಲೆಗೆ ಬಂದು ಬಿದ್ದಾಗ ವೈದ್ಯರು ಅರವಳಿಕೆ ನೀಡಬಹುದಿತ್ತು. ಆದರೆ ಬಲೆಗೆ ಬಿದ್ದ ಬಳಿಕ ಚಿರತೆಯ ಬೆನ್ನಿನ ಮೇಲೆ ಫೈರಿಂಗ್ ಮಾಡಲಾಗಿತ್ತು. ಬೆನ್ನಿಂದ ಹೊಕ್ಕ ಗುಂಡು ಎದೆಗೆ ನುಗ್ಗಿತ್ತು. ಪರಿಣಾಮ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ.