ಚಿಕ್ಕನಾಯಕನಹಳ್ಳಿ:ಹೇಮಾವತಿ ನಾಲೆಗಾಗಿ ಭೂಮಿಕಳೆದುಕೊಂಡ ಗ್ರಾಮಸ್ಥರು ಪರಿಹಾರ ನೀಡುವವರೆಗೂ ಕಾಮಗಾರಿ ನಡೆಸಲು ಬಿಡುವುದಿಲ್ಲವೆಂದು ನಾಲಾ ಸ್ಥಳದಲ್ಲಿಯೇ ಮೂರು ದಿನದಿಂದ ನಡೆಸುತ್ತಿದ್ದ ಪ್ರತಿಭಟನೆ ಸಂಧಾನದ ಮೂಲಕ ಇತ್ಯರ್ಥಗೊಂಡಿದೆ.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಲಕ್ಮಗೊಂಡನಹಳ್ಳಿ ಗ್ರಾಮದ ಐದಾರು ರೈತರಿಗೆ ಯಾವುದೇ ಪರಿಹಾರ ನೀಡದೆ ಭೂಮಿ ವಶಕ್ಕೆ ಪಡೆದು ನಾಲಾ ಕಾಮಗಾರಿಗೆ ಮುಂದಾದಾಗ ಅಲ್ಲಿನ ರೈತರು ನಾಲಾ ಬದಿಯಲ್ಲಿಯೇ ಪ್ರತಿಭಟನೆಗೆ ಇಳಿದರು. ನಮಗೆ ಭೂ ಪರಿಹಾರದ ಅವಾರ್ಡ್ ನೀಡದೆ ಕಾಮಗಾರಿಗೆ ಮುಂದಾಗಿದ್ದಾರೆ, ನ್ಯಾಯ ಕೇಳಿದವರನ್ನು ಬೆದರಿಸಿದ್ದಾರೆ, ಜೊತೆಗೆ ನಮ್ಮಗಳ ಮೇಲೆ ಪೊಲೀಸ್ ದೂರು ನೀಡಿ ದೌರ್ಜನ್ಯದಿಂದ ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದ್ದಾರೆ, ಆದರೆ ನಾವು ಪ್ರಾಣವನ್ನೂ ಲೆಕ್ಕಿಸದೆ ಹೋರಾಟ ಮಾಡಿ ಕೆಲಸ ತಡೆಹಿಡಿಯುತ್ತೇವೆ, ನಮಗೆ ಪರಿಹಾರದ ಭರವಸೆ ನೀಡಿ ನಂತರ ಕೆಲಸ ಮುಂದುವರೆಸಿರಿ ಎಂದು ಪಟ್ಟು ಹಿಡಿದ ರೈತರನ್ನು ಮನವೊಲಿಸಲು ಅಧಿಕಾರಿಗಳಿಂದ ಹಲವು ಸುತ್ತಿನ ಮಾತುಕತೆ ನಡೆದರೂ ಫಲಪ್ರದವಾಗಿರಲಿಲ್ಲ. ನಂತರ ಡಿವೈಎಸ್‌ಪಿ ಚಂದನ್‌ಕುಮಾರ್, ತಹಸೀಲ್ದಾರ್ ತೇಜಸ್ವಿನಿ, ಸರ್ವೇ ಇಲಾಖೆಯ ಬಸವರಾಜು, ಅರಣ್ಯಾಧಿಕಾರಿಗಳು ಮತ್ತು ಮುಂತಾದ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಚಂದನ್ ಕುಮಾರ್ ಭೂಮಿಗೆ ಸಂಬಂಧಿಸಿದಂತೆ ನೇರ ಖರೀದಿ ಅವಾರ್ಡ್ನ್ನು ನೀಡುವುದಾಗಿ ಭರವಸೆಯಿತ್ತು ಇದಕ್ಕೆ ಸಂಬಂಧಿಸಿದ ಸರ್ವೆಯನ್ನೂ ಖುದ್ದಾಗಿ ನಾವೆ ಮಾಡಿಕೊಡುತ್ತೇವೆ ಈ ಪ್ರಕ್ರಿಯೆಗಳು ನಡೆದು ನಿಮಗೆ ಜಿಲ್ಲಾಧಿಕಾರಿಗಳ ಸಹಿಯೊಂದಿಗಿರುವ ಎಲ್ಲ ರೈತರ ಭೂ ವಿವರಗಳನ್ನೊಳಗೊಂಡ ನೇರ ಖರೀದಿ ಅವಾರ್ಡ್ ಪ್ರತಿಯನ್ನು ನೀಡಿದ ನಂತರ ನಾಲೆ ಕೆಲಸವನ್ನು ಆರಂಭಿಸಲಾಗುವುದೆಂದರು.