ಬೆಂಗಳೂರು, ಡಿ. 19: ಕೆಪಿಎಲ್ ಟೂರ್ನಿಯ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣಗಳ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಮನೆ ಮೇಲೆ ದಾಳಿ ಮಾಡಿರುವ ಸಿಸಿಬಿ ಪೊಲೀಸರು ಸಂತೋಷ್ ಮೆನನ್ ರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ನ್ಯಾಯಾಲಯದಿಂದ ಸಚ್೯ ವಾರಂಟ್ ಪಡೆದು ಡಾಲರ್ಸ್ ಕಾಲನಿಯ ಸಂತೋಷ್ ಮೆನನ್ ಮನೆಯ ಮೇಲೆ ದಾಳಿ ನಡೆಸಿ ಹಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ವಿಚಾರಣೆ ಆರಂಭಿಸಿರುವುದಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಕೆಪಿಎಲ್ ಕ್ರಿಕೆಟ್ ಟೂರ್ನಿಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದಲ್ಲಿ ಸಂತೋಷ್ ಮೆನನ್ ಪಾತ್ರದ ಬಗ್ಗೆ ವಿವರ ನೀಡಲು ನಿರಾಕರಿಸಿದರು. ಇನ್ನೂ ಹೆಚ್ಚಿನ ತನಿಖೆ ಪ್ರಗತಿಯಲ್ಲಿರುವ ಕಾರಣ ಮುಂದಿನ ದಿನಗಳಲ್ಲಿ ವಿವರ ನೀಡುವುದಾಗಿ ಹೇಳಿದರು.
ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದಲ್ಲಿ ವಿವಿಧ ತಂಡಗಳ ಮಾಲೀಕರು,ಕೋಚ್ ಗಳು,ಆಟಗಾರರು,ಸೇರಿ ಇಲ್ಲಿವರೆಗೆ ೯ ಮಂದಿಯನ್ನು ಬಂಧಿಸಿ ವಿಚಾರಣೆ ಆರಂಭಿಸಲಾಗಿದೆ.ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ರೆಡ್ಡಿ ಅವರನ್ನು ಎರಡು ದಿನಗಳ ಹಿಂದೆ ಮೂರು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿದೆ.ವಿಚಾರಣೆ ವೇಳೆ ಹಲವು ಮಹತ್ವದ ವಿಚಾರಗಳನ್ನು ಬಾಯಿಬಿಟ್ಟಿರುವುದಾಗಿ ತಿಳಿಸಿದ ಸಂದೀಪ್ ಪಾಟೀಲ್ ಅವುಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿ ಸಂತೋಷ್ ಮೆನನ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಲಾಗಿದೆ ಎಂದರು.
ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣಗಳಲ್ಲಿ ಸಿನಿಮಾ ನಟಿಯರೂ ಸೇರಿದಂತೆ ಮತ್ತಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದೆ. ಅವರೆಲ್ಲರನ್ನೂ ವಿಚಾರಣೆಗೊಳಪಡಿಸುವುದಾಗಿ ಸಿಸಿಬಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.