ಖರ್ಗೆ ಪರ ಕೆಲಸ: ಡಿಸಿಪಿ ಶಶಿಕುಮಾರ್ ಬಂಧನಕ್ಕೆ ಬಿಜೆಪಿ ಒತ್ತಾಯ

ಖರ್ಗೆ ಪರ ಕೆಲಸ: ಡಿಸಿಪಿ ಶಶಿಕುಮಾರ್ ಬಂಧನಕ್ಕೆ ಬಿಜೆಪಿ ಒತ್ತಾಯ

ಬೆಂಗಳೂರು, ಏ. 23, ನ್ಯೂಸ್ ಎಕ್ಸ್ ಪ್ರೆಸ್: ಚುನಾವಣಾ ಆಯೋಗದ ಗಮನಕ್ಕೆ ತರದೆ ರಜೆ ಹಾಕಿ ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪರ ಕೆಲಸ ಮಾಡುತ್ತಿರುವ ಬೆಂಗಳೂರು ಉತ್ತರ ಡಿಸಿಪಿ ಶಶಿಕುಮಾರ್ ಅವರನ್ನು ಕೂಡಲೇ ಬಂಧಿಸಬೇಕು ಹಾಗೂ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಮಾಡಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ನೇತೃತ್ವದಲ್ಲಿ ಬಿಜೆಪಿ ನಿಯೋಗ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದೆ. ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿ ಕಲ್ಬುರ್ಗಿ ಚುನಾವಣೆಯ ವೆಬ್ ಕಾಸ್ಟಿಂಗ್ ಮಾಡಬೇಕು,ಸೂಕ್ಷ್ಮ ಮತಗಟ್ಟೆಗೆ ಹೆಚ್ಚಿನ ಭದ್ರತೆ ಕಲ್ಪಿಸಬೇಕು ಎನ್ನುವ ಮನವಿಯ ಜೊತೆಗೆ ಬೆಂಗಳೂರು ಉತ್ತರ ಡಿಸಿಪಿ ಶಶಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ಸಲ್ಲಿಸಲಾಗಿದೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ್, ಬೆಂಗಳೂರು ಉತ್ತರ ಡಿಸಿಪಿ ಶಶಿಕುಮಾರ್ ಅವರು ಕರ್ತವ್ಯಕ್ಕೆ ರಜೆ ಹಾಕಿ ಕಲ್ಬುರ್ಗಿಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ವೇಳೆ ಸರಣಿ ರಜೆ ಕೊಡವಾಗ ಚುನಾವಣಾ ಆಯೋಗದ ಗಮನಕ್ಕೆ ತರಬೇಕು ಆದರೆ ಆಯೋಗದ ಗಮನಕ್ಕೆ ತರದೆ ರಜೆ ಹಾಕಿ ಹೋಗಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ರಜೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆ ಕಲ್ಬುರ್ಗಿಯಲ್ಲಿ ಅವರು ಎಸ್ಪಿ ಆಗಿ ಕೆಲಸ ಮಾಡಿದ್ದವರು, ಖರ್ಗೆ ಕುಟುಂಬಕ್ಕೆ ಆಪ್ತರು ಹಾಗಾಗಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಕಲ್ಬುರ್ಗಿಯಲ್ಲಿ 516 ಸೂಕ್ಷ್ಮ ಮತಗಟ್ಟೆಗಳಿವೆ, ಅಲ್ಲಿ ರೌಡಿ ಶೀಟರ್ ಗಳನ್ನು ಕರೆದು ಎಚ್ಚರಿಕೆ ನೀಡುವ ಕೆಲಸ ಮಾಡಬೇಕು ಆದರೆ ಅಲ್ಲಿನ ಡಿಸಿ ಹಾಗೂ ಎಸ್ಪಿ ಅದನ್ನು ಮಾಡಿಲ್ಲ ಎಂದು ಬಿಜೆಪಿ ಆರೋಪ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos