ಕೊಚ್ಚಿ, ಮಾ.2, ನ್ಯೂಸ್ ಎಕ್ಸ್ ಪ್ರೆಸ್: ”ನಾನು ದೇಶ ವಿರೋಧಿ ಹೇಳಿಕೆ ನೀಡಿಲ್ಲ. ಭಾಷಣದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡಿದ್ದೆ. ಟೀಕೆಯನ್ನು ಮುಂದುವರಿಸುವೆ. ಒಂದು ವೇಳೆ ಟೀಕೆ ಮಾಡುವುದು ಅಪರಾಧ ಎನ್ನುವುದಾದರೆ ನಾನು ಜೈಲಿಗೆ ಹೋಗಲೂ ಸಿದ್ಧವಿದ್ದೇನೆ” ಸಿಪಿಎಂನ ಕೇರಳ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ.
ಪಾಕಿಸ್ತಾನದ ಉಗ್ರಗಾಮಿ ಶಿಬಿರದ ಮೇಲೆ ಭಾರತದ ವಾಯುಪಡೆ ದಾಳಿ ನಡೆಸಿದ ಬಳಿಕ ಬಾಲಕೃಷ್ಣನ್ ಅವರು ಪ್ರಧಾನಿಯನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಕೇರಳದ ಬಿಜೆಪಿ ಘಟಕ ದೇಶ ವಿರೋಧಿ ಹೇಳಿಕೆ ನೀಡಿರುವ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿತ್ತು.
ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಯನ್ನು ಹಾಳುಗೆಡಹಲು ಬಿಜೆಪಿ-ಆರ್‌ಎಸ್‌ಎಸ್‌ನ ತಂತ್ರದ ಭಾಗವಾಗಿ ಭಾರತ ವಾಯು ಸೇನೆ ದಾಳಿ ನಡೆಸಿದೆ. ಮೋದಿ ಸರಕಾರ ಕಾಶ್ಮೀರ ವಿವಾದವನ್ನು ಬಗೆಹರಿಸುವ ಬದಲಿಗೆ ಜಮ್ಮು-ಕಾಶ್ಮೀರ ಜನರನ್ನು ವೈರಿಗಳಾಗಿ ಪರಿವರ್ತಿಸಲು ಯತ್ನಿಸುತ್ತಿದೆ ಎಂದು ಬಾಲಕೃಷ್ಣನ್ ತಿಳಿಸಿದ್ದರು.
ನಾನು ಮೊನ್ನೆ ನೀಡಿದ ಹೇಳಿಕೆಯ ವೇಳೆ ಟಿವಿ ಸುದ್ದಿ ವಾಹಿನಿಗಳು ಇದ್ದವು. ಎಲ್ಲರೂ ನನ್ನ ಭಾಷಣದ ವಿಡಿಯೋವನ್ನು ಪರಿಶೀಲಿಸಬಹುದು. ಭಾರತೀಯ ವಾಯು ಪಡೆಯ ದಾಳಿಯ ಶ್ರೇಯಸ್ಸು ಬಿಜೆಪಿಗೆ ಸಲ್ಲುವುದಿಲ್ಲ. ಅದರ ಎಲ್ಲ ಶ್ರೇಯಸ್ಸು ಭಾರತೀಯ ವಾಯು ಪಡೆಗೆ ಸಲ್ಲುತ್ತದೆ. ಇಡೀ ದೇಶ ವಾಯ ಪಡೆಯ ಬೆನ್ನಿಗೆ ನಿಂತಿದೆ. ಪಾಕಿಸ್ತಾನದ ಜೆಇಎಂ ಶಿಬಿರದ ಮೇಲೆ ನಡೆದ ವಾಯು ದಾಳಿಯಿಂದಾಗಿ ಪಕ್ಷದ ಸೀಟುಗಳು ಹೆಚ್ಚಾಗಲಿದೆ ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯು ಬಿಜೆಪಿಯು ಸೇನೆಯ ದಾಳಿಯನ್ನು ಹೇಗೆ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ತೋರಿಸುತ್ತಿದೆ ಎಂದು ಬಾಲಕೃಷ್ಣನ್ ಹೇಳಿದ್ದಾರೆ.