ಯಾದಗಿರಿ, ಅ. 17: ಇಂದು ಯಾದಗಿರಿ ಜಿಲ್ಲೆಗೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಮ್ಮ ಭಾಷಣದುದ್ದಕ್ಕೂ ಸಿಎಂ ಗುಣಗಾನ ಮಾಡಿದರು.
ಹೌದು, ಸಿಎಂ ಯಡಿಯೂರಪ್ಪನವರಿಗೆ ಜೈ ಎನ್ನುವ ಮೂಲಕ ಮಾತನ್ನ ಪ್ರಾರಂಭಿಸಿದ ಕಟೀಲ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗುಲಾಮಗಿರಿ ಸಂಕೇತವಾಗಿದ್ದ ಹೈದ್ರಾಬಾದ್ ಕರ್ನಾಟಕ ಹೆಸರನ್ನ ಬದಲಿಸಿದ್ದಾರೆ. ಹಾಗಾಗಿ ಅವರಿಗೆ ಅಭಿನಂದನೆ ಎಂದು ಬಿಎಸ್ವೈ ಅವರನ್ನು ಕೊಂಡಾಡಿದರು.
ಇದೇ ವೇಳೆ ಬಿಜೆಪಿ ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದು, ನಾನು ಇಡೀ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ರಾಜ್ಯದ ಅಧ್ಯಯನ, ಕಾರ್ಯಕರ್ತರ ಭೇಟಿ ಮಾಡುತ್ತಿದ್ದೇನೆ. ಸಂಘಟನೆ ಅಭಿಯಾನ ಮಾಡುತ್ತಿದ್ದು, ಸದಸ್ಯತ್ವ ನೋಂದಣಿಗೆ ಹೆಚ್ಚಿನ ಒತ್ತು ಕೊಡುತ್ತಿದ್ದೇವೆ ಎಂದರು.
ಇನ್ನು ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಪ್ರವಾಸ, ಪಕ್ಷ ಸಂಘಟನೆ ಹಿನ್ನಲೆ ನಾನು ಈಗಾಗಲೇ 31 ಜಿಲ್ಲೆ ಪ್ರವಾಸ ಮುಗಿಸಿದ್ದು, ಇದು 32 ನೇ ಜಿಲ್ಲೆ ಎಂದು ರಾಜ್ಯದಲ್ಲಿನ ಜಿಲ್ಲೆಗಳ ಸಂಖ್ಯೆಯನ್ನು ತಪ್ಪಾಗಿ ಹೇಳಿದ್ದು ಮಾತ್ರ ವಿಪರ್ಯಾಸ.