ಬೆಂಗಳೂರು: ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ 2023-24ನೇ ಸಾಲಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಶುಭಾರಂಭವನ್ನು ಮಾಡಿದೆ ಹುಬ್ಬಳ್ಳಿಯಲ್ಲಿ ನಡೆದ ಎಲೈಟ್ ಸಿ ವಿಭಾಗದ ಪಂದ್ಯದಲ್ಲಿ ಪಂಜಾಬ್ ಗೆ ಏಳು ವಿಕೆಟ್ಗಳ ಸೋಲುಣಿಸಿದೆ. ಕೊನೆಯ ದಿನ ಪಂಜಾಬ್ ತಂಡಕ್ಕೆ ಇನಿಂಗ್ಸ್ ಸೋಲು ತಪ್ಪಿಸಿಕೊಂಡಿದ್ದೊಂದೇ ಸಮಾಧಾನ ವಾಯಿತು.
ಕರ್ನಾಟಕ ತಂಡ ರಣಜಿ ಟ್ರೋಫಿ ಪ್ರಸಕ್ತ ಋತುವಿನ ಮೊದಲ ಪಂದ್ಯವನ್ನು ಪಂಜಾಬ್ ವಿರುದ್ಧ ಏಳು ವಿಕೆಟ್‌ಗಳಿಂದ ಗೆದ್ದುಕೊಂಡು ಶುಭಾರಂಭ ಮಾಡಿತು. ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಾಲ್ಕನೇ ದಿನವಾದ ನಿನ್ನೆ ಪಂಜಾಬ್ ತಂಡ ಲಂಚ್ ನಂತರ ಎರಡನೇ ಇನಿಂಗ್ಸ್‌ನಲ್ಲಿ 413 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನಲ್ಲಿ 362 ರನ್‌ಗಳ ಭಾರಿ ಮುನ್ನಡೆ ಪಡೆದಿದ್ದ ಮಯಂಕ್ ಬಳಗ ಗೆಲುವಿಗೆ ಬೇಕಾಗಿದ್ದ 52 ರನ್‌ಗಳ ಅಲ್ಪ ಗುರಿಯನ್ನು 3 ವಿಕೆಟ್ ಕಳೆದುಕೊಂಡು ಮುಟ್ಟಿತು.