ಬೆಂಗಳೂರು: ಕನ್ನಡಿಗರು ಕಾತುರದಿಂದ ಕಾಯುತ್ತಿರುವ ಕನ್ನಡ ರಾಜ್ಯೋತ್ಸವ ಬಂದೇ ಬಿಟ್ಟಿದೆ. ಕನ್ನಡ ಹಬ್ಬ “ಕನ್ನಡ ರಾಜ್ಯೋತ್ಸವ” ಆಚರಣೆಗೆ ನಾವೆಲ್ಲಾ ತುದಿಗಾಲಿನಲ್ಲಿ ನಿಂತಿದ್ದೀವಿ.
“ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ” – ಇದು ರಾಷ್ಟ್ರಕವಿ, ಮಹಾಕವಿ ಕುವೆಂಪು ಅವರು ರಚಿಸಿದ ಗೀತೆಯ ಮೊದಲ ಸಾಲುಗಳು. ನಾವು ಎಲ್ಲೇ ಹೋದ್ರೂ, ಎಲ್ಲೇ ಇದ್ರೂ, ಯಾವತ್ತಿಗೂ ಕೂಡ ಕನ್ನಡವನ್ನು ಬಿಟ್ಟುಕೊಡಬಾರದು ಎಂಬುದನ್ನು ಈ ಸಾಲು ಒತ್ತಿ ಹೇಳುತ್ತದೆ. ಕೇವಲ ಭಾಷೆಯಾಗದೆ ಭಾವನೆಯೂ ಆಗಿದೆ ಕನ್ನಡ.
ಕರ್ನಾಟಕ ರಾಜ್ಯಕ್ಕೆ ಮೊದಲು ಇದ್ದ ಹೆಸರು ಮೈಸೂರು ರಾಜ್ಯ ಎಂದು. 1950 ರಲ್ಲಿ ಭಾರತವು ಗಣರಾಜ್ಯವಾಯಿತು. ಅಂತೆಯೇ 1956ರ ನವೆಂಬರ್ 1ರಂದು ವಿವಿಧ ಪ್ರದೇಶಗಳಲ್ಲಿ ಕನ್ನಡ ಮಾತನಾಡುತ್ತಿದ್ದ ಜನರನ್ನು ಒಗ್ಗೂಡಿಸಿ ಮೈಸೂರು ರಾಜ್ಯ ರಚನೆಯಾಯಿತು. 1973ರ ನವೆಂಬರ್ 1ರಂದು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.
1956ರ ನವೆಂಬರ್ 1 ರಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿಕೊಂಡು ಬರಲಾಗಿದ್ದು, ಈ ಬಾರಿ ನಾವು 68ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಎಲ್ಲೆಲ್ಲೂ ಕನ್ನಡ ಬಾವುಟ ಹಾರಾಡಲಿದೆ. ನಾಡಗೀತೆ ಮೊಳಗಲಿದೆ. ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯ, ಬೇರೆ ದೇಶಗಳಲ್ಲಿರುವ ಕನ್ನಡಿಗರು ಈ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ.
ಕೇವಲ ಈ ದಿನ ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಕನ್ನಡ ಉಳಿಯುವುದಿಲ್ಲ. ಕನ್ನಡ ನಮ್ಮ ಉಸಿರಾಗಿರಬೇಕು. ಎಂತಹ ಸಂದರ್ಭದಲ್ಲೂ ಕನ್ನಡ ಬಿಟ್ಟುಕೊಡಬಾರದು. ಬೇರೆ ಭಾಷೆಗಳನ್ನು ಕಲಿಯುವುದು ಖಂಡಿತ ತಪ್ಪಲ್ಲ. ಆದರೆ ಬೇರೆ ಭಾಷೆ ಕಲಿತು ಕನ್ನಡ ಮರೆಯುವುದು ತಪ್ಪು. ಈ ಸುಂದರ ಸಂಭ್ರಮದ ದಿನದಂದು ನಾವೆಲ್ಲರೂ ನಮ್ಮ ನೆಲ, ಜಲ, ಭಾಷೆ ಉಳಿವಿಗಾಗಿ ಪಣ ತೊಡಬೇಕಾಗಿದೆ.