ಬೆಂಗಳೂರು, ಏ. 16, ನ್ಯೂಸ್ ಎಕ್ಸ್ ಪ್ರೆಸ್: 2015ರ ಸೆಪ್ಟೆಂಬರ್ನಲ್ಲಿ ‘ದುನಿಯಾ’ ಸೂರಿ ನಿರ್ದೇಶಿಸಿದ ‘ಕೆಂಡಸಂಪಿಗೆ’ ಸಿನಿಮಾ ಬಿಡುಗಡೆಯಾಗಿತ್ತು. ಯಾವುದೇ ಸ್ಟಾರ್ಗಳಿಲ್ಲದ ಆ ಚಿತ್ರ ಪ್ರೇಕ್ಷಕ ವಲಯದಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿತ್ತು. ಚಿತ್ರದಲ್ಲಿನ ನಟನೆಗಾಗಿ ವಿಕ್ಕಿ ವರುಣ್, ಮಾನ್ವಿತಾ ಕಾಮತ್ಗೆ ಪ್ರಶಂಸೆಯೂ ದೊರಕಿತ್ತು. ಜತೆಗೆ ‘ಕೆಂಡಸಂಪಿಗೆ’ ಚಿತ್ರದ ಪ್ರೀಕ್ವೆಲ್ ‘ಕಾಗೆ ಬಂಗಾರ’ ನೋಡಬೇಕೆಂಬ ಕುತೂಹಲವೂ ಹೆಚ್ಚಿತ್ತು. ಆದರೆ, ‘ಕಾರಣಾಂತರಗಳಿಂದ ‘ಕಾಗೆ ಬಂಗಾರ’ ಸಿನಿಮಾ ಕೈಬಿಟ್ಟಿದ್ದೇನೆ’ ಎಂಬ ಬ್ರೇಕಿಂಗ್ ಸುದ್ದಿ ಕೊಟ್ಟಿದ್ದರು ನಿರ್ದೇಶಕ ಸೂರಿ. ಈ ಹೇಳಿಕೆ ನೀಡಿಯೇ ಮೂರು ವರ್ಷದ ಮೇಲಾಗಿದೆ. ಹೀಗಿರುವಾಗಲೇ ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ‘ಕಾಗೆ ಬಂಗಾರ’ ಚಿತ್ರವನ್ನು ಸೂರಿ ಮತ್ತೆ ಕೈಗೆತ್ತಿಕೊಂಡಿದ್ದಾರೆ. ಹೌದು, ‘ಕೆಂಡಸಂಪಿಗೆ’ ಸಿನಿಮಾ ತೆರೆಕಂಡ ಬಳಿಕ ‘ಪವರ್ಸ್ಟಾರ್’ ಪುನೀತ್ ರಾಜ್ಕುಮಾರ್ ಜತೆ ‘ದೊಡ್ಮನೆ ಹುಡ್ಗ’ ಸಿನಿಮಾ ಮಾಡಿದ್ದ ಸೂರಿ, ಶಿವರಾಜ್ಕುಮಾರ್ ಜತೆಗೆ ‘ಟಗರು’ ಸಿನಿಮಾ ಮಾಡಿ ಬಿಗ್ ಹಿಟ್ ನೀಡಿದ್ದರು. ಇನ್ನೇನು ‘ಕಾಗೆ ಬಂಗಾರ’ ಸಿನಿಮಾ ಶುರುಮಾಡಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅದು ನೆರವೇರಿರಲಿಲ್ಲ. ಇದೀಗ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ‘ಕಾಗೆ ಬಂಗಾರ’ ಸಿನಿಮಾ ಕೆಲಸಗಳಲ್ಲಿಯೂ ಸೂರಿ ತೊಡಗಿಸಿಕೊಂಡಿದ್ದಾರೆ. ಸದ್ಯ ‘ಡಾಲಿ’ ಧನಂಜಯ ಜತೆ ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾ ಮಾಡುತ್ತಿರುವ ಅವರು, ಆ ಚಿತ್ರದ ಕೆಲಸ ಮುಗಿಯುತ್ತಿದ್ದಂತೆ ‘ಕಾಗೆ ಬಂಗಾರ’ ಶುರು ಮಾಡಲಿದ್ದಾರೆ. ಈಗಾಗಲೇ ಸ್ಕ್ರಿಪ್ಟಿಂಗ್ ಕೆಲಸಗಳೂ ಪೂರ್ತಿಯಾಗಿವೆಯಂತೆ. ‘ಕೆಂಡಸಂಪಿಗೆ’, ‘ಕಾಗೆ ಬಂಗಾರ’ ಮತ್ತು ‘ಬ್ಲ್ಯಾಕ್ ಮ್ಯಾಜಿಕ್’ ಹೀಗೆ ಒಟ್ಟು ಮೂರು ಭಾಗಗಳಲ್ಲಿ ಸಿನಿಮಾ ಆಗಲಿದೆ ಎಂದು ಹಿಂದೆಯೇ ಸೂರಿ ಹೇಳಿಕೊಂಡಿದ್ದರು. ಮೊದಲ ಭಾಗದಲ್ಲಿ ವಿಕ್ಕಿ ಮತ್ತು ಮಾನ್ವಿತಾ ಪ್ರಮುಖ ಪಾತ್ರದಲ್ಲಿದ್ದರು. ‘ಕಾಗೆ ಬಂಗಾರ’ದಲ್ಲಿ ನಟ ಪ್ರಶಾಂತ್ ಸಿದ್ದಿ ಮುಖ್ಯಭೂಮಿಕೆ ನಿಭಾಯಿಸಲಿದ್ದಾರೆ.