ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೂವರು ಬಿಜೆಪಿಯ ಓರ್ವ ಅಭ್ಯರ್ಥಿ ಜಯ ಸಾಧಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ನಾಸಿರ್ ಹುಸೇನ್ ಜಯಗಳಿಸಿ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿರುವ ಆರೋಪ ಕೇಳಿ ಬಂದಿದೆ.
ರಾಜ್ಯಸಭೆಯ ನೂತನ ಸದಸ್ಯರಾಗಿ ಆಯ್ಕೆಯಾದ ಸೈಯ್ಯದ್ ನಾಸಿರ್ ಹುಸೇನ್ ಅವರ ಬೆಂಬಲಿಗರು ದೇಶ ವಿರೋಧಿ ಘೋಷಣೆ ಕೂಗಿರುವ ಆರೋಪದ ಕುರಿತು, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರ ನೇತೃತ್ವದಲ್ಲಿ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು, ಘೋಷಣೆ ಕೂಗುವ ಕಿಡಿಗೇಡಿಗಳು ಹಾಗೂ ಅವರನ್ನು ವಿಧಾನಸೌಧಕ್ಕೆ ಕರೆತಂದಿದ್ದ ನಾಸಿರ್ ಹುಸೇನ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡ ಅವರು, ರಾಜ್ಯಸಭೆ ಸ್ಥಾನದಿಂದ ನಾಸಿರ್ ಹುಸೇನ್ ಅವರನ್ನು ವಜಾ ಮಾಡಬೇಕು ಹಾಗೂ ದೇಶದ್ರೋಹದ ಘೋಷಣೆಗಳನ್ನು ಕೂಗಿದ ದ್ರೋಹಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಸರಕಾರವನ್ನು ಒತ್ತಾಯ ಮಾಡಿದರು.
ನಗರ ಜೆಡಿಎಸ್ ಘಟಕದ ಕಾರ್ಯಾಧ್ಯಕ್ಷ ಜಿ.ಟಿ.ರೇವಣ್ಣ, ಪರಿಶಿಷ್ಟ ವಿಭಾಗದ ವೇಲು, ಯುವ ಘಟಕದ ಯುವ ಕಾರ್ಯಾಧ್ಯಕ್ಷ ಚಂದ್ರಶೇಖರ್, ಮಾದೇಗೌಡ ಹಾಗೂ ಮತ್ತು ಎಲ್ಲಾ ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರು ಹಾಗೂ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.