ಬೆಂಗಳೂರು, ಮಾ, 30, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ಬರುವ ರಾಮನಗರದಲ್ಲಿ ಜೆಡಿಎಸ್ ಕಾರ್ಯಕರ್ತರೇ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯ ವಿರುದ್ಧ, ಕಾಂಗ್ರೆಸ್ ನಾಯಕರ ದರ್ಪದ ವಿರುದ್ಧ ತಿರುಗಿಬಿದ್ದಿದ್ದರೆ, ಹಾಸನದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಇಲ್ಲಿ, ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ತಿರುಗಿ ನಿಂತಿದ್ದಾರೆ. ಲೋಕಸಭೆಗೆ ಹಾಸನವನ್ನು ಪ್ರತಿನಿಧಿಸುತ್ತಾ ಬಂದಿದ್ದ ಮಾಜಿ ಪ್ರಧಾನಿ ದೇವೇಗೌಡರು ಈ ಬಾರಿ ತನ್ನ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಭಾವುಕರಾಗಿಯೇ ಬಿಟ್ಟು ಕೊಟ್ಟು ತಾವು ತುಮಕೂರಿನ ಹಾದಿ ಹಿಡಿದಿದ್ದಾರೆ. ಅವರು ತುಮಕೂರಿಗೆ ಹೋಗುತ್ತಿದ್ದಂತೆ ಇಲ್ಲಿ ಹಾಸನದಲ್ಲಿ ಭಿನ್ನಮತ ಭುಗಿಲೆದ್ದಿದೆ.
ಇದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಲ್ಲಿ ಭಾರೀ ತಲೆನೋವು ತಂದಿದೆ. ದೇವೇಗೌಡರು ಹಾಸನದಲ್ಲಿ ಮೊಮ್ಮಗ ರೇವಣ್ಣರನ್ನು ಕಣಕ್ಕಿಳಿಸುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ದೋಸ್ತಿಗಳಾದ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದರು. ಅದರಲ್ಲೂ ಅವತ್ತು ಕಾಂಗ್ರೆಸ್‌ನಲ್ಲಿದ್ದ ಎ. ಮಂಜು ಅವರು ನಮ್ಮದು ಏನಿದ್ದರೂ ದೇವೇಗೌಡರಿಗೆ ಮಾತ್ರ ಬೆಂಬಲ ಎಂಬ ಮಾತನ್ನು ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರಲ್ಲದೆ, ಕ್ರಮೇಣ ಒಂದಷ್ಟು ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡಿದ್ದರು. ಸದಾ ಬಡಿದಾಡಿಕೊಂಡೇ ಬಂದವರು ಹಾಗೆ ನೋಡಿದರೆ ಮೊದಲಿನಿಂದಲೂ ಹಾಸನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬದ್ಧ ವೈರಿಗಳೇ. ಇಲ್ಲಿನ ಕಾರ್ಯಕರ್ತರು ಸದಾ ರಾಜಕೀಯವಾಗಿ ಬಡಿದಾಡಿಕೊಂಡೇ ಬಂದವರು. ಇವರ ಮನಸ್ಥಿತಿ ಕೂಡ ಅಷ್ಟು ಸುಲಭಕ್ಕೆ ಒಂದಾಗುವಂಥದ್ದಲ್ಲ ಎಂಬುದು ಗೊತ್ತಿರುವ ವಿಚಾರವೇ. ಹೀಗಿದ್ದರೂ ರಾಜ್ಯ ನಾಯಕರ ಆದೇಶದಂತೆ ಕೆಲವು ಸ್ಥಳೀಯ ಕಾಂಗ್ರೆಸ್ ಮುಖಂಡರು ಅನಿವಾರ್ಯವಾಗಿ ಜೆಡಿಎಸ್‌ನೊಂದಿಗೆ ಸಖ್ಯ ಬೆಳೆಸಿ ಪ್ರಚಾರದಲ್ಲಿ ಭಾಗವಹಿಸುತ್ತಿದ್ದರೂ ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಕಾರ್ಯಕರ್ತರು ಒಂದಾದಂತೆ ಕಾಣುತ್ತಿಲ್ಲ.