ಮೈತ್ರಿ ಜತೆ ಸಮಾಲೋಚಿಸಿ ಪಟ್ಟಿ ಪ್ರಕಟ: ಜೆಡಿಎಸ್

ಮೈತ್ರಿ ಜತೆ ಸಮಾಲೋಚಿಸಿ ಪಟ್ಟಿ ಪ್ರಕಟ: ಜೆಡಿಎಸ್

ಬೆಂಗಳೂರು, ಮಾ.16, ನ್ಯೂಸ್ ಎಕ್ಸ್ ಪ್ರೆಸ್: ಮೈತ್ರಿ ಪಕ್ಷ ಕಾಂಗ್ರೆಸ್‌ ಜತೆಗೆ ಸಮಾಲೋಚಿಸಿಯೇ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲು ಜೆಡಿಎಸ್‌ ತೀರ್ಮಾನಿಸಿದೆ.

ಜೆಡಿಎಸ್‌ ಕಚೇರಿಯಲ್ಲಿ ಗುರುವಾರ ರಾತ್ರಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಹೊಣೆಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ಅವರಿಗೆ ಬಿಡಲಾಯಿತು.

ಜೆಡಿಎಸ್‌ ಈಗಾಗಲೇ ಮಂಡ್ಯ (ನಿಖಿಲ್‌ ಕುಮಾರಸ್ವಾಮಿ), ಹಾಸನ (ಪ್ರಜ್ವಲ್‌ ರೇವಣ್ಣ) ಹಾಗೂ ಶಿವಮೊಗ್ಗ (ಮಧು ಬಂಗಾರಪ್ಪ) ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

‘ಮಂಡ್ಯ ಹಾಗೂ ಹಾಸನದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನವನ್ನು ವಿರೋಧಿಗಳು ಮಾಡುತ್ತಿದ್ದಾರೆ. ಈ ಎರಡು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಸ್ಪರ್ಧೆ ಬಗ್ಗೆ ಕಳೆದ ಮೂರು ತಿಂಗಳಿಂದ ಮಾಧ್ಯಮಗಳಲ್ಲಿ ನಕಾರಾತ್ಮಕ ‍ಪ್ರಚಾರ ಬರುತ್ತಿದೆ. ಕಾಂಗ್ರೆಸ್‌ ನಾಯಕರ ಜತೆಗೆ ಸಮಾಲೋಚಿಸಿಯೇ ಉಳಿದ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವುದು ಸೂಕ್ತ’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಪ್ರತಿಪಾದಿಸಿದರು ಎಂದು ಗೊತ್ತಾಗಿದೆ.

‘ಎಂಟು ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯಲು ನಮಗೆ ಅವಕಾಶ ಲಭಿಸಿದೆ. ಇದು ನಮಗೆ ಪರೀಕ್ಷೆ ಇದ್ದಂತೆ. ಹೆಚ್ಚು ಸ್ಥಾನಗಳನ್ನು ಗೆದ್ದಷ್ಟು ಮೈತ್ರಿ ಸರ್ಕಾರ ಭದ್ರವಾಗುತ್ತದೆ. 28 ಕ್ಷೇತ್ರಗಳಲ್ಲೂ ಜೆಡಿಎಸ್‌ ಕಾರ್ಯಕರ್ತರು ಏಕ ಭಾವದಿಂದ ಕೆಲಸ ಮಾಡಬೇಕು. ಕಾಂಗ್ರೆಸ್‌ ಕಾರ್ಯಕರ್ತರ ಜತೆಗೂಡಿ ಕೆಲಸ ಮಾಡಬೇಕು’ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ವಿಜಯಪುರ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸಲು ಇದೊಂದು ಸುವರ್ಣಾವಕಾಶ ಎಂದೂ ಹೇಳಿದರು ಎಂದು ಗೊತ್ತಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos