ಚಿಕ್ಕೋಡಿ, ಜ. 27: ಗಡಿಭಾಗದ ಸುಕ್ಷೇತ್ರ ಯಡೂರಿನ ಕೃಷ್ಣಾ ನದಿಯ ದಂಡೆಯ ಮೇಲೆ ನೆಲೆಸಿರುವ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವವು ಸಾವಿರಾರು ಭಕ್ತರ ರಾಜಕೀಯ ಮುಖಂಡರು ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಮಹಾರಾಷ್ಟ್ರ ಕರ್ನಾಟಕ ಗಡಿಭಾಗದ ಜಾಗೃತ ದೇವಸ್ಥಾನ ಎಂದು ಪ್ರಸಿದ್ಧಿ ಪಡೆದಿರುವ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ಗ್ರಾಮದ ಶ್ರೀವೀರಭದ್ರೇಶ್ವರ ಮಹಾರಥೋತ್ಸವಕ್ಕೆ ಸಾವಿರಾರು ಜನರ ಸಮ್ಮುಖದಲ್ಲಿ ಸಂಭ್ರಮ, ಸಡಗರದಿಂದ ಜರುಗಿತು. ಯಡೂರು ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವವು ಬಸ್ ನಿಲ್ದಾಣದ ಮೂಲಕ ಹಳೆಯ ಯಡೂರಿನ ಬಸವೇಶ್ವರ ದೇವಸ್ಥಾನ ತಲುಪಿ ಮತ್ತೆ ವೀರಭದ್ರೇಶ್ವರ ದೇವಸ್ಥಾನಕ್ಕೆ ವಾಪಸ್ಸಾಯಿತು.
ರಥೋತ್ಸವದ ಉದ್ದಕ್ಕೂ ಭಕ್ತರ ಉತ್ಸಾಹ ಮುಗಿಲು ಮುಟ್ಟಿತ್ತು. ಭಕ್ತರು ತೇರಿನ ಮೇಲೆ ಕೊಬ್ಬರಿ, ಖಾರೀಕ, ಸಕ್ಕರೆ ಹೂವು ಭಕ್ತಿಯಿಂದ ಅರ್ಪಣೆ ಮಾಡಿದರು. ಹರ ಹರ ಮಹಾದೇವ,ಶ್ರಿ ವೀರಭದ್ರೇಶ್ವರ ಮಹಾರಾಜಕೀ ಜೈ ಘೋಷಣೆಗಳು ಮುಗಿಲು ಮುಟ್ಟಿದವು. ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಯುವಕರು ಭಕ್ತಿ ಭಾವದಿಂದ ತೇರೆಳೆದು ಸಂಭ್ರಮಿಸಿದರು. ತೇರಿನ ಉದ್ದಕ್ಕೂ ಡೊಳ್ಳು ಕುಣಿತ, ಝಾಂಜ್ ಪಥಕ್ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗಹಿಸಿದ್ದವು.