ಬೆಂಗಳೂರು, ಏ. 9, ನ್ಯೂಸ್ ಎಕ್ಸ್ ಪ್ರೆಸ್: ಕ್ಷುಲ್ಲಕ ವಿಚಾರಕ್ಕೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ತೆರಳಿದ ವ್ಯಕ್ತಿಯನ್ನೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಮನೆ ಮುಂದೆ ಪ್ರತಿದಿನ ಲಾರಿ-ಟ್ರ್ಯಾಕ್ಟರ್ ಚಲಾಯಿಸುತ್ತಾನೆ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಮನೆಯ ಮಾಲಿಕ ಹಾಗೂ ಚಾಲಕನ ನಡುವೆ ಶುರುವಾದ ಜಗಳ, ಬಿಡಿಸಲು ಬಂದ ಮಧ್ಯವರ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಮುನಿಸ್ವಾಮಿ ಎಂಬುವವನೆ ಬಂಧಿತ ಆರೋಪಿ. ಮುನಿರಾಜು ಎಂಬಾತ ಮೃತ ದುದೈರ್ವಿ. ಯಲಹಂಕದ ಶ್ರೀನಿವಾಸ ನಗರದ ವಾಸಿಯಾಗಿದ್ದ ಆರೋಪಿ ಮುನಿಸ್ವಾಮಿ ಮನೆ ಮುಂದೆ ಪ್ರತಿ ದಿನ ಲಾರಿ ಹಾಗೂ ಟ್ರ್ಯಾಕ್ಟರ್ ಚಲಾಯಿಸುತ್ತಾನೆ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಮೃತನ ಸಂಬಂಧಿ ಮೂರ್ತಿ ಎಂಬುವರ ಜೊತೆ ಜಗಳ ತೆಗೆದಿದ್ದಾನೆ. ವಿಷಯ ತಿಳಿದು ಜಗಳ ಬಿಡಿಸಲು ಹೋದ ಮುನಿರಾಜುನನ್ನು ಗುರಿಯಾಗಿಸಿ ಚಾಕುವಿನಿಂದ ಹೊಟ್ಟೆಗೆ ತಿವಿದಿದ್ದಾನೆ. ತಕ್ಷಣ ತೀವ್ರಗಾಯಗೊಂಡ ಮುನಿರಾಜುನನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮುನಿಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.