ಬೆಂಗಳೂರು, ಮಾ.4, ನ್ಯೂಸ್ ಎಕ್ಸ್ ಪ್ರೆಸ್: ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್‍ಜಾಧವ್ ಮಾರಾಟವಾಗಿರುವ ವಸ್ತು. ಸಂಸತ್ ಸದಸ್ಯರಾಗುವ ದುರಾಸೆಯಿಂದ ಅವರು ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿ ಬಿಜೆಪಿ ಸೇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲೇ ಇದ್ದುಕೊಂಡು ಮೋಸ, ವಂಚನೆ ಮಾಡುವುದಕ್ಕಿಂತ ಈ ರೀತಿ ರಾಜೀನಾಮೆ ಕೊಟ್ಟು ಹೊರ ಹೋಗುವುದ ಸೂಕ್ತ ಎಂದು ಅತೃಪ್ತರಿಗೆ ಪರೋಕ್ಷವಾಗಿ ಚಾಟಿ ಬೀಸಿದರು.
ಉಮೇಶ್ ಜಾಧವ್ ಅವರಿಗೆ ಕಾಂಗ್ರೆಸ್ 2 ಬಾರಿ ಟಿಕೆಟ್ ನೀಡಿತ್ತು. ಅವರು ಗೆದ್ದು ಶಾಸಕರಾಗಿದ್ದರು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅವರನ್ನು ಸಂಸದೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಈ ಸರ್ಕಾರದಲ್ಲಿ ಒಳ್ಳೆಯ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು ಎಂದರು.
ಕಾಂಗ್ರೆಸ್ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಟ್ಟು ಅವರನ್ನು ಉತ್ತಮ ನಾಯಕರನ್ನಾಗಿ ಬೆಳೆಸಿತ್ತು. ಆದರೆ, ಎಲ್ಲವನ್ನೂ ಮರೆತು ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿದ್ದಾರೆ. ಸ್ಥಳೀಯ ಮಟ್ಟದಲ್ಲಿನ ರಾಜಕೀಯ ಕಾರಣಗಳಿಂದ ಅವರು ಕಾಂಗ್ರೆಸ್ ಬಿಡಲು ಕಾರಣ ಎಂದು ಅವರು ಹೇಳಿಕೆ ನೀಡಿದ್ದಾರೆ.
ಸ್ಥಳೀಯ ಕಾರಣವನ್ನೇ ಮುಂದುಟ್ಟುಕೊಂಡರೆ ಬಹುತೇಕರು ರಾಜೀನಾಮೆ ಕೊಡಬೇಕಾಗುತ್ತದೆ. ಅದೆಲ್ಲ ಸುಳ್ಳು. ಉಮೇಶ್ ಜಾಧವ್ ಅವರು ಮುಕ್ತವಾಗಿ ಮಾತನಾಡಬೇಕು. ನಾನು ಮಾರಾಟವಾಗಿರುವ ವಸ್ತು, ಬಿಜೆಪಿಗೆ ಬಿಕರಿಯಾಗಿದ್ದೇನೆ. ಮುಂದಿನ ಸಂಸತ್ ಚುನಾವಣೆಗೆ ಟಿಕೆಟ್ ಕೊಡುತ್ತಾರೆ ಎಂದು ಬಿಜೆಪಿ ಭರವಸೆ ನೀಡಿದೆ. ಸಂಸದನಾಗುವ ಆಸೆಯಿಂದ ಬಿಜೆಪಿ ಸೇರುತ್ತಿದ್ದೇನೆ ಎಂದು ನಿಜ ಹೇಳಬೇಕು ಎಂದು ಆಗ್ರಹಿಸಿದರು.
ಈವರೆಗೂ ಅವರ ಬಗ್ಗೆ ಗೌರವವಿತ್ತು. ಸೌಜನ್ಯದ ವ್ಯಕ್ತಿ ಎಂದು ನಂಬಿದ್ದೆ. ಆದರೆ, ಇಂತಹವರನ್ನೆಲ್ಲಾ ಪಕ್ಷ ಬೆಳೆಸಿದೆಯಲ್ಲಾ ಎಂಬ ಬೇಜಾರಾಗುತ್ತದೆ ಎಂದರು.
ಉಮೇಶ್ ಜಾಧವ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವರಲ್ಲ. ಪ್ರಚಾರ ಬಯಸದೆ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ ಖರ್ಗೆ ಅವರ ವ್ಯಕ್ತಿತ್ವ ದೊಡ್ಡದು. ದಕ್ಷ ಆಡಳಿತಗಾರರು. ಅವರ ಬಗ್ಗೆ ಹರುವಾಗಿ ಮಾತನಾಡುವುದು ಒಳ್ಳೆಯದಲ್ಲ. ಉಮೇಶ್ ಜಾಧವ್ ಮಾತ್ರವಲ್ಲ. ಅವರಂತೆ ಮನಸ್ಥಿತಿ ಹೊಂದಿರುವ, ಪಕ್ಷಕ್ಕೆ ದ್ರೋಹ ಬಗೆಯುವ ಯಾರಾದರೂ ಸರಿ ಅವರು ಪಕ್ಷದಿಂದ ಹೊರ ಹೋಗಬೇಕು. ಇಂತಹವರು ಹೋದಾಗಲೇ ಫಿಲ್ಟರ್ ಆಗಿ ಪಕ್ಷ ಸದೃಢವಾಗಿ ನಿಲ್ಲಲು ಸಾಧ್ಯ ಎಂದು ತಿಳಿಸಿದರು.
ನಾಯಕರು ಬರುತ್ತಾರೆ, ಹೋಗುತ್ತಾರೆ. ಪಕ್ಷ ಶಾಶ್ವತ. ದೇಶ ಸೇವೆ ಮಾಡಿಕೊಂಡು ಕಾಂಗ್ರೆಸ್ ನಿರಂತರವಾಗಿ ಅಸ್ಥಿತ್ವದಲ್ಲಿ ಇರಲಿದೆ. ಶೋಷಿತ ವರ್ಗಗಳ ವಿರೋಧಿ ನಿಲುವು ಹೊಂದಿರುವ ಬಿಜೆಪಿಗೆ ಉಮೇಶ್ ಜಾಧವ್ ಸೇರಿರುವುದು ದುರಾದೃಷ್ಟಕರ. ಜನ ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್‍ಗಾಂಧಿ ಕುರಿತು ಮಾಡಿರುವ ಪರೋಕ್ಷ ಹಾಸ್ಯಕ್ಕೆ ತೀಕ್ಷಣ ಪ್ರತಿಕ್ರಿಯೆ ನೀಡಿದ ದಿನೇಶ್‍ಗುಂಡೂರಾವ್, ದೇಶದ ಇತಿಹಾಸದಲ್ಲಿ ಇಷ್ಟು ಕೀಳು ಮಟ್ಟದ, ಕ್ರೂ ಹಾಸ್ಯ ಮಾಡಿದ ಪ್ರಧಾನಿಯನ್ನು ನಾನು ನೋಡಿಲ್ಲ. ಇಂತಹ ವ್ಯಕ್ತಿ ದೇಶದ ಪ್ರಧಾನಿಯಾದರಲ್ಲ ಎಂಬುದು ನೋವಿನ ವಿಚಾರ ಎಂದರು. ಮೋದಿ ಮಾತನಾಡುವಾಗ ಅವರ ಮುಖದಲ್ಲಿ ದ್ವೇಷದ ಭಾವನೆ ಎದ್ದು ಕಾಣುತ್ತಿದ್ದನ್ನು ನಾನು ಗಮನಿಸಿದ್ದೇನೆ ಎಂದು ಹೇಳಿದರು.