ನವದೆಹಲಿ, ಏ. 9, ನ್ಯೂಸ್ ಎಕ್ಸ್ ಪ್ರೆಸ್: ಕಳೆದೆರೆಡು ದಿನಗಳ ಹಿಂದೆ ದೆಹಲಿ ಸೇರಿ 50 ಕಡೆಗಳಲ್ಲಿ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ, ರಾಜಕೀಯ ಪಕ್ಷವೊಂದರ 281 ಕೋಟಿ ರೂ ಹವಾಲಾ ಹಗರಣವನ್ನೂ ಪತ್ತೆ ಮಾಡಿದೆ. ದೆಹಲಿಯಲ್ಲಿನ ಪ್ರಮುಖ ರಾಜಕೀಯ ಪಕ್ಷವೊಂದರ ಕೇಂದ್ರ ಕಚೇರಿಯಿಂದ ಇಷ್ಟೊಂದು ಮೊತ್ತದ ಹಣ ವರ್ಗಾವಣೆ ಆಗಿದೆ. ದೆಹಲಿಯ ತುಘಲಕ್ ರಸ್ತೆಯಲ್ಲಿನ ಹಿರಿಯ ಕಾರ್ಯಕರ್ತರೊಬ್ಬರ ಮನೆಯಿಂದ 20 ಕೋಟಿ ರೂ ಹವಾಲಾ ಹಣ ರವಾನೆಯಾಗಿದೆ ಎಂಬ ಮಾಹಿತಿಯೂ ಆದಾಯ ಇಲಾಖೆಗೆ ಸಿಕ್ಕಿದೆ.
ದಾಳಿ ನಡೆಸಿದ ವೇಳೆ ಹುಲಿ ಚರ್ಮ, 14.6 ಕೋಟಿ ರೂ ಅಕ್ರಮ ಹಣ, 252 ಮದ್ಯದ ಬಾಟಲ್ ಸೇರಿ ಅಕ್ರಮ ಹಣದ ಸಂಗ್ರಹಣೆ ಹಾಗೂ ವಿತರಣೆಯ ಬರಹಗಳು, ಕಂಪ್ಯೂಟರ್ ಕಡತಗಳು, ಎಕ್ಸೆಲ್ ಶೀಟ್ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ 242 ಕೋಟಿಗೂ ಹೆಚ್ಚು ಹಣವನ್ನು ಬೋಗಸ್ ಬಿಲ್ಗಳ ಮೂಲಕ ಪಡೆದು, ವಿವಿಧೆಡೆ ಹಂಚಿರುವ ಬರಹ ಸಹ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ಮಧ್ಯಪ್ರದೇಶ ಸಿಎಂ ಕಮಲ್ನಾಥ್ ಮಾಜಿ ಆಪ್ತ ಸಹಾಯಕ ಪ್ರವೀಣ್ ಕಕ್ಕರ್ ಹಾಗೂ ಮಾಜಿ ಸಲಹೆಗಾರ ರಾಜೇಂದ್ರ ಕುಮಾರ್ ಮಿಗ್ಲಾನಿ ಮನೆ ಮೇಲೆ ಐಟಿ ದಾಳಿ ನಡೆಸಿತ್ತು. ಚುನಾವಣೆ ಹೊಸ್ತಿಲಲ್ಲಿ ನಡೆದ ದಿಢೀರ್ ದಾಳಿ ಹಲವು ಚರ್ಚೆಗಳನ್ನು ಹುಟ್ಟುಹಾಕಿತ್ತು. ಈ ಮೊದಲು ಕರ್ನಾಟಕದ ಕೆಲ ರಾಜಕಾರಣಿಗಳ ಮನೆ ಮೇಲೆ ದಾಳಿ ನಡೆಸಿದ್ದು ಸಾಕಷ್ಟು ಸುದ್ದಿಯಾಗಿತ್ತು.