ಹುಬ್ಬಳ್ಳಿ, ಜ. 30: ಸರ್ವ ಜಾತಿ, ಧರ್ಮ ಒಗ್ಗೂಡಿಸುವ ನಿಟ್ಟಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಶರಣ ಸಮ್ಮೇಳನವು ಯಾವುದೇ ರಾಜಕೀಯ ಮತ್ತು ವ್ಯಕ್ತಿ ಸ್ವಾರ್ಥಕ್ಕೆ ದುರ್ಬಳಕೆ ಆಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸ್ವಾಮೀಜಿಗಳ ಮೇಲಿದೆ ಎಂದು ಜನಪಂಥ ವೇದಿಕೆ ಅಧ್ಯಕ್ಷ ಶಂಕರಪ್ಪ ಪ್ರತಿಪಾದಿಸಿದ್ದಾರೆ.
ಚಿತ್ರದುರ್ಗದ ಮುರುಘಾ ಶರಣರು ಜಾತಿ, ಧರ್ಮ ರಹಿತವಾದ ಸಮುದಾಯ ನಿರ್ಮಿಸುವ ದಿಸೆಯಲ್ಲಿ ಆಯೋಜಿಸಲು ನಿರ್ಧರಿಸಿರುವ ಅಂತಾರಾಷ್ಟ್ರೀಯ ಶರಣ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಹನ್ನೆರಡನೇ ಶತಮಾನದ ನಂತರ ಹಾಗೂ ಪ್ರಸ್ತುತ ದಿನಮಾನಗಳಲ್ಲಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮುರುಘಾ ಶರಣರು ಸಮಾವೇಶ ಆಯೋಜಿಸಲು ನಿರ್ಧರಿಸಿದ್ದಾರೆ.
ಸಮಾವೇಶದ ಸದುದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಭೋವಿ ಸಮಾಜದ ಸಮಸ್ತರೂ ಸಮಾವೇಶದಲ್ಲಿ ಪಾಲ್ಗೊಳಲಿದ್ದಾರೆ. ಇದೊಂದು ಜಾಗತಿಕ ಸಮಾವೇಶ. ಹೀಗಾಗಿ ಜಾಗತಿಕ ಮಟ್ಟದಲ್ಲಿ ನಡೆಯಲಿರುವ ಸಮಾವೇಶವು ಸಾರ್ಥಕತೆ ಕಾಣಬೇಕಿದೆ. ಹೀಗಾಗಿ ಗುಂಪುಗಾರಿಕೆ ಮಾಡುವ ಮೂಲಕ ಮುರುಘಾ ಶ್ರೀಗಳನ್ನಾಗಲಿ ಇಲ್ಲವೇ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಹೆಸರು ದುರುಪಯೋಗ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಸಮ್ಮೇಳನದಲ್ಲಿ ಟಿಬೆಟಿಯನ್ನರ ಧರ್ಮಗುರು ದಲೈಲಾಮಾ ಸೇರಿದಂತೆ ಪ್ರಪಂಚದಾದ್ಯಂತ ಇರುವ ವಿವಿಧ ಧರ್ಮ, ಜಾತಿಗಳ ಧರ್ಮಗುರುಗಳು ಭಾಗವಹಿಸಲಿದ್ದಾರೆ. ಹನ್ನೆರಡನೇ ಶತಮಾನದ ಬಸವಾದಿ ಶರಣರು ಪ್ರತಿಪಾದಿಸಿದ ಸಮಾನತೆ ಸಮಾಜದ ಪುನರುತ್ಥಾನದ ಕನಸನ್ನು ಸಾಕಾರಗೊಳಗಿಸುವ ಗುರಿ ಸಮಾವೇಶದ್ದಾಗಿದೆ ಎಂದರು.
ಇಮ್ಮಡಿ ಸಿದ್ದರಾಮೇಶ್ವರ ನೇತೃತ್ವದಲ್ಲಿ ಭೋವಿ ಸಮುದಾಯ ಸಮಾವೇಶದ ಯಶಸ್ವಿಗಾಗಿ ಶ್ರಮಿಸಲಿದೆ. ದೇಶದಲ್ಲಿ ಸಂವಿಧಾನ ಅಭದ್ರಗೊಳಿಸುವ ಚರ್ಚೆ ತೀವ್ರವಾಗಿರುವ ಸಂದರ್ಭದಲ್ಲಿ ಈ ಸಮಾವೇಶ ಆಯೋಜನೆ ಆಗುತ್ತಿರುವುದು ಅತ್ಯಂತ ಸ್ತುತ್ಯಾರ್ಹ ಮತ್ತು ಸಮಯೋಚಿತ ಸಂಗತಿಯಾಗಿದೆ ಎಂದರು.
ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಚಂದ್ರಣ್ಣ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ಶರಣ ಸಮಾವೇಶವು ಯಾವುದೇ ವ್ಯಕ್ತಿ, ಗುಂಪುಗಾರಿಕೆ ಸ್ವಾರ್ಥಕ್ಕೆ ಬಳಕೆ ಆಗದಂತೆ ಎಚ್ಚರ ವಹಿಸಬೇಕಿದೆ ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ಮುರುಘಾ ಶರಣರು ಮಹತ್ತರ ಉದ್ದೇಶವನ್ನಿಟ್ಟುಕೊಂಡು ಸಮಾವೇಶ ಆಯೋಜನೆ ಮಾಡುತ್ತಿದ್ದಾರೆ. ಅದನ್ನು ಯಶಸ್ಸಿನತ್ತ ಕೊಂಡೊಯ್ಯುವುದು ನಮ್ಮೆಲರ ಹೊಣೆ ಆಗಿದೆ. ಸಮಾವೇಶದಲ್ಲಿ ಪಟ್ಟಭದ್ರ ಹಿತಾಸಕ್ತಿಗಳಿಗೆ ಅವಕಾಶ ಇಲ್ಲ. ಅಂತಹ ಬೆಳವಣಿಗೆಗೆ ಆಸ್ಪದ ನೀಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಭೋವಿ ಸಮುದಾಯದ ಮುಖಂಡರು, ಪ್ರಮುಖರು ಜನಪಂಥ ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.